ಪಡುಬಿದ್ರೆ: ಒಂದು ಕೋಟಿ ರೂ. ಅಧಿಕ ಬೆಲೆಯ ಮಾದಕ ವಸ್ತುಗಳನ್ನು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಜಪ್ತಿಮಾಡಿದ್ದರು. ನ್ಯಾಯಾಲಯದ ಅನುಮತಿ ಪಡೆದು ಉಡುಪಿ ಜಿಲ್ಲೆಯ ನಂದಿಕೂರು ಕೈಗಾರಿಕಾ ಪ್ರದೇಶದಲ್ಲಿ ನಾಶಪಡಿಸಲಾಯಿತು.

30,13,100 ರೂ. ಬೆಲೆಯ 103 ಕೆ.ಜಿ ಗಾಂಜಾ, 9,82,500 ರೂ. ಬೆಲೆಯ ಹೈಡ್ರೋವೀಡ್ ಗಾಂಜಾ, 30,33,000 ರೂ. ಬೆಲೆಯ ಎಂ.ಡಿ.ಎಂ.ಎ ಮಾತ್ರೆಗಳು, 30 ಲಕ್ಷ ರೂ. ಬೆಲೆಯ ಎಲ್.ಎಸ್.ಡಿ ಸ್ಟಿಪ್ಸ್ ಸೇರಿ ಒಟ್ಟು 1,00,28,600 ರೂ. ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಯಿತು.

ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಾದ ಮಣಿಪಾಲ ಪೊಲೀಸ್ ಠಾಣೆಯಲ್ಲಿ 12, ಉಡುಪಿ ನಗರ ಠಾಣೆಯಲ್ಲಿ 10, ಸಿಇಎನ್ ರಲ್ಲಿ 8, ಕುಂದಾಪುರ 6, ಕಾಪು 5, ಪಡುಬಿದ್ರಿ ಹಾಗು ಕುಂದಾಪುರ ಗ್ರಾಮಾಂತರದಲ್ಲಿ ತಲಾ 2, ಗಂಗೊಳ್ಳಿ, ಹಿರಿಯಡ್ಕ ಮತ್ತು ಶಿರ್ವ ಠಾಣೆಗಳಲ್ಲಿ ತಲಾ 1 ಸೇರಿ 13 ವರ್ಷಗಳಿಂದ ಒಟ್ಟು 50 ಪ್ರಕರಣಗಳಲ್ಲಿ ಜಪ್ತಿ ಮಾಡಲಾದ ಮಾದಕ ವಸ್ತುಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಸ್ಪಿ ವಿಷ್ಣುವರ್ಧನ್, ಎ ಎಸ್ಪಿ ಕುಮಾರ ಚಂದ್ರ, ಡಿವೈಎಸ್ಪಿ ಪ್ರಮೋದ್ ಕುಮಾರ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್ ,ಕಾರ್ಕಳ ಡಿವೈಎಸ್ಪಿ ಎಸ್ ವಿಜಯ ಪ್ರಸಾದ್, ವೃತ್ತ ನಿರೀಕ್ಷಕರಾದ ಮಂಜುನಾಥ್, ಸಂಪತ್, ಮಂಜುನಾಥ ಗೌಡ, ಪ್ರಮೋದ್ ಹಾಗು ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.











