ಮರಣದಂಡನೆ | ಗಲ್ಲು ಶಿಕ್ಷೆ ಬದಲು ನೋವು ರಹಿತ ಪರ್ಯಾಯ ವಿಧಾನಕ್ಕೆ ಸುಪ್ರೀಂ ಕೋರ್ಟ್ ನಕಾರ

ಹೊಸದಿಲ್ಲಿ: ಮರಣ ದಂಡನೆಗೆ ಜಾರಿಗೊಳಿಸುವ ಸಂದರ್ಭ ಗಲ್ಲಿಗೇರಿಸುವ ಪದ್ಧತಿ ರದ್ದುಗೊಳಿಸಿ ಅದರ ಬದಲಿಗೆ ವಿಷದ ಚುಚ್ಚುಮದ್ದು ನೀಡುವುದು ಸೇರಿದಂತೆ ಕಡಿಮೆ ನೋವುಂಟು ಮಾಡುವ ಪರ್ಯಾಯ ವಿಧಾನವನ್ನು ಜಾರಿಗೆ ತರಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರನ್ನೊಳಗೊಂಡ ಪೀಠ, ತಜ್ಞರ ಸಮಿತಿಯ ಮೂಲಕ ಪ್ರಸ್ತುತ ಜಾರಿಯಲ್ಲಿರುವ ಮರಣದಂಡನೆ ವಿಧಾನದ ಕುರಿತು ಸಮಗ್ರ ಪರಿಶೀಲನೆ ನಡೆಸುವುದಕ್ಕೆ ಈ ತೀರ್ಪು ಕೇಂದ್ರ ಸರಕಾರಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ.ಹಿರಿಯ ವಕೀಲ ರಿಷಿ ಮಲ್ಲೋತ್ರಾ ಅವರು 2017ರಲ್ಲಿ ಸಲ್ಲಿಸಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಪೀಠ ಈ ತೀರ್ಪು ನೀಡಿದೆ.
ಗಲ್ಲಿಗೇರಿಸುವ ವಿಧಾನವನ್ನು ಶಾಸನದಿಂದ ತೆಗೆದು ಹಾಕುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು. ಗಲ್ಲಿಗೇರಿಸುವುದನ್ನು ರದ್ದುಗೊಳಿಸಿ ಅದರ ಬದಲಿಗೆ ವಿಷದ ಚುಚ್ಚು ಮದ್ದು ನೀಡುವುದು, ಗುಂಡು ಹಾರಿಸುವುದು, ವಿದ್ಯುತ್ ಆಘಾತ ನೀಡುವುದು ಅಥವಾ ಗ್ಯಾಸ್ ಚೇಂಬರ್‌ನಂತಹ ಕಡಿಮೆ ನೋವಿನ ವಿಧಾನಗಳನ್ನು ಜಾರಿಗೆ ತರುವಂತೆ ಅವರು ಅರ್ಜಿಯಲ್ಲಿ ಕೋರಿದ್ದರು.








