Thursday, April 25, 2024
spot_imgspot_img
spot_imgspot_img

ಕೊರೊನ ಎರಡನೇ ಅಲೆ‌ಯ ನಿಯಂತ್ರಣ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ: 1 ಲಕ್ಷಕ್ಕೂ ಅಧಿಕ ಪ್ರಕರಣಗಳಿರುವ 12 ರಾಜ್ಯಗಳ ಕುರಿತು ಪರಾಮರ್ಶೆ

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಎರಡನೇ ಅಲೆ‌ಯನ್ನು ನಿಯಂತ್ರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿ 1 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿರುವ 12 ರಾಜ್ಯಗಳ ಕುರಿತು ಪರಾಮರ್ಶೆ ನಡೆಸಿ ಮಾಹಿತಿ ಪಡೆದರು.

ದೇಶದಲ್ಲಿ ಕೊರೊನಾ​ ಲಸಿಕೆ ನೀಡುವ ವೇಗ ತಗ್ಗಬಾರದು. ಹೆಚ್ಚು ಸೋಂಕಿರುವ ರಾಜ್ಯಗಳಿಗೆ ಲಸಿಕೆ ಕೊರತೆ ಆಗಬಾರದು. ಲಾಕ್​ಡೌನ್ ನಡುವೆಯೂ ಜನರಿಗೆ ಕೊವಿಡ್​ ಲಸಿಕೆ ಸಿಗಬೇಕು. ಲಸಿಕೆ ಹಾಕಲು ನೇಮಿಸಿದ ಸಿಬ್ಬಂದಿಗೆ ಬೇರೆ ಕರ್ತವ್ಯ ನೀಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊರೊನಾ ಸೊಂಕು ಗಣನೀಯವಾಗಿ ಹೆಚ್ಚುತ್ತಿರುವ ಮಹಾರಾಷ್ಟ್ರ, ಕರ್ನಾಟಕ, ಕೇರಳ, ರಾಜಸ್ಥಾನ, ಗುಜರಾತ್, ಛತ್ತೀಸ್​ಗಢ, ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿನ ಕೊವಿಡ್ ಸೋಂಕಿತರ ಕುರಿತ ಮಾಹಿತಿ ಪಡೆದರು.

ಈಗಾಗಲೇ 17.7 ಕೋಟಿ ಡೋಸ್ ಲಸಿಕೆಯನ್ನು ರಾಜ್ಯಗಳಿಗೆ ಸರಬರಾಜು ಮಾಡಲಾಗಿದೆ. 45 ವರ್ಷಕ್ಕಿಂತ ಮೇಲ್ಪಟ್ಟ ಶೇಕಡಾ 31ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಲಸಿಕೆ ನೀಡಲಾಗಿದೆ ಎಂದು ಪ್ರಧಾನಿಯವರಿಗೆ ತಿಳಿಸಿದ್ದಾಗಿ ಪ್ರಧಾನಮಂತ್ರಿ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಕೊವಿಡ್ ಹೆಚ್ಚಳದಿಂದ ಲಾಕ್​ಡೌನ್ ಆದರೂ ಸಹ ಲಸಿಕೆ ವಿತರಣೆಯನ್ನು ನಿಲ್ಲಿಸಬಾರದು. ಕೊರೊನಾ ವಾರಿಯರ್ಸ್​ಗಳಿಗೆ ಲಸಿಕೆ ವಿತರಣೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದರು. ಅಷ್ಟೇ ಅಲ್ಲದೇ, ಅತಿ ಹೆಚ್ಚು ಕೊವಿಡ್ ಪ್ರಕರಣಗಳು ದಾಖಲಾಗುತ್ತಿರುವ ಜಿಲ್ಲೆಗಳ ವಿವರವನ್ನು ಅವರು ಪಡೆದುಕೊಂಡರು. ಈ ಜಿಲ್ಲೆಗಳಲ್ಲಿ ಕೊವಿಡ್ ಸೋಂಕು ಹೆಚ್ಚುವುದನ್ನು ತಡೆಯಲು ಕೈಗೊಳ್ಳಬೇಕಾದ ಸೂಕ್ತ ನಿರ್ದೇಶನವನ್ನು ಅಧಿಕಾರಿಗಳಿಗೆ ಸೂಚಿಸಿದರು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಹರ್ಷವರ್ಧನ್, ವಾಣಿಜ್ಯ ಮತ್ತು ರೈಲ್ವೇ ಖಾತೆ ಸಚಿವ ಪಿಯೂಷ್ ಗೋಯೆಲ್ ಮುಂತಾದ ಸಚಿವರು ಸಭೆಯಲ್ಲಿ ಭಾಗವಹಿಸಿದ್ದರು.

- Advertisement -

Related news

error: Content is protected !!