



ಬೆಂಗಳೂರು: ರಾಜ್ಯದಲ್ಲಿ ಹಿಂದೂಪರ ಹೋರಾಟಗಾರ ಹಾಗೂ ಗೋರಕ್ಷಕ ಎಂದು ವಿವಿಧ ಹೋರಾಟಗಳ ಮೂಲಕ ಹಲ್ಲೆ ಹಾಗೂ ವಿವಿಧ ಪ್ರಕರಣಗಳಡಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ದರು. ಆದರೆ, ಗಣೇಶ ಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ವಿರುದ್ಧ ದಾಖಲಾಗಿದ್ದ ಗೂಂಡಾ ಕಾಯ್ದೆಯನ್ನು ರದ್ದುಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್‌ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ, ನಗರ ಪೊಲೀಸ್ ಆಯುಕ್ತರು ಮತ್ತು ಸಿಸಿಬಿ ಪೊಲೀಸರಿಗೆ ಹೈಕೋರ್ಟ್‌ನಿಂದ ಆ.24ರಂದು ನೋಟಿಸ್ ಜಾರಿ ಮಾಡಿತ್ತು. ಗೂಂಡಾ ಕಾಯ್ದೆಯಡಿ ತಮ್ಮನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತ್ತು.
ಇನ್ನು ಈ ಅರ್ಜಿಯ ಕುರಿತು ವಿಚಾರಣೆ ವೇಳೆ ಪುನೀತ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಅರ್ಜಿದಾರರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಅರ್ಜಿದಾರರು ‘ರಾಷ್ಟ್ರ ರಕ್ಷಣಾ ಪಡೆ’ ಸಂಘಟನೆ ಕಟ್ಟಿದೇಶಕ್ಕಾಗಿ ಹೋರಾಡುವ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ದುರುದ್ದೇಶಪೂರ್ವಕವಾಗಿ ಹಲವು ಪ್ರಕರಣ ಹೂಡಿ ಮತ್ತು ರಾಜಕೀಯ ದ್ವೇಷದ ಕಾರಣಕ್ಕೆ ಅರ್ಜಿದಾರರನ್ನು ಆ.11ರಂದು ಗೂಂಡಾ ಕಾಯ್ದೆಯಡಿ ಅಕ್ರಮವಾಗಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಯಾವುದೇ ವಿವೇಚನೆ ಬಳಸದೆ ಏಕಾಏಕಿ ಗೂಂಡಾ ಕಾಯ್ದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷೀಯ ನಡೆಯಾಗಿದ್ದು, ಆ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.