Sunday, May 5, 2024
spot_imgspot_img
spot_imgspot_img

ಪುತ್ತೂರು ಗಣೇಶೋತ್ಸವದ ಸಮಿತಿಯಿಂದ 18 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕೋಟೆಚಾ, ಕಾರ್ಯಾಧ್ಯಕ್ಷ ಪುತ್ತಿಲ ಸಹಿತ ಹಲವರು ಗೇಟ್‌ ಪಾಸ್‌..! ಆಕ್ರೋಶಗೊಂಡ ಪುತ್ತಿಲ ಪರಿವಾರ – ಬಣ ಬಿಕ್ಕಟ್ಟು ತೀವ್ರ

- Advertisement -G L Acharya panikkar
- Advertisement -

ಪುತ್ತೂರು: ಪುತ್ತಿಲ ಪರಿವಾರದ ಒಗ್ಗಟ್ಟಿನ ಬಲ ಜಾಸ್ತಿಯಾಗುತ್ತಿದ್ದಂತೆ ಅದರಲ್ಲಿ ಗುರುತಿಸಿಕೊಂಡವರನ್ನು ಸಂಘ ಪರಿವಾರದಿಂದ ಹೊರಗಿಡುವ ಪ್ರಯತ್ನ ಆಗುತ್ತಿದೆಯೇನೋ ಎಂಬಂತೆ ನಡೆಯುತ್ತಿರುವ ಘಟನೆಗಳು ಸಾಕ್ಷಿಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ವೈಭವದ ಶೋಭಾ ಯಾತ್ರೆ ನಡೆಯುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಮಿತಿಗೆ ಹಲವು ವರ್ಷ ದುಡಿದ ಪ್ರಮುಖ ಪದಾಧಿಕಾರಿಗಳಾದ ಪ್ರಭಾವಿ ಹಿಂದೂ ಮುಖಂಡ ಅರುಣ್ ಕುಮಾರ್‌ ಪುತ್ತಿಲ ಸಹಿತ ಪ್ರಮುಖರನ್ನು ಚುನಾವಣೆಯ ನೆಪವೊಡ್ಡಿ ಕೈಬಿಟ್ಟಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದ ಪುತ್ತಲ ಅವರು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡಿ ಎರಡನೇ ಸ್ಥಾನಿಯಾಗಿ ಹೊರಹೊಮ್ಮಿದ್ದರು. ಬ್ಯಾಟ್ ಚಿಹ್ನೆಯಲ್ಲಿ ಸ್ವಾಭಿಮಾನದ ಹೋರಾಟ ಎಂಬಂತೆ ಪಕ್ಷೇತರ ಸ್ಪರ್ಧಿಸಿ ಸಣ್ಣ ಮತಗಳ ಅಂತರದಲ್ಲಿ ರೋಚಕ ಸೋಲು ಕಂಡ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರನ್ನು ಸುಮಾರು 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಗಣೇಶೋತ್ಸವ ಕಾರ್ಯಾಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ ಎಂದು ಪುತ್ತಿಲ ಅಭಿಮಾನಿಗಳು ಹೇಳುತ್ತಿದ್ದಾರೆ. ಅರುಣ್ ಕುಮಾರ್‍ ಪುತ್ತಿಲ ಕಳೆದ ಹತ್ತು ವರ್ಷಗಳಿಂದ ಗಣೇಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿದ್ದರು.

ಸ್ವಾತಂತ್ರ್ಯ ಹೋರಾಟಕ್ಕಾಗಿ ಹಿಂದೂಗಳ ಒಗ್ಗೂಡಿಸಲು ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರನಾಥ ತಿಲಕರು ಕೈಗೊಂಡ ಗಣೇಶೋತ್ಸವ ಪುತ್ತೂರಿನಲ್ಲಿ ಚುನಾವಣೆಯ ಕಾರಣಕ್ಕೆ ಹಿಂದೂಗಳಲ್ಲೇ ಒಗ್ಗಟ್ಟು ಮುರಿದಾಂತಾಗಿದೆ.

ಪುತ್ತಿಲ ಮಾತ್ರವಲ್ಲದೆ, ಕಳೆದ 18 ವರ್ಷ ಅಧ್ಯಕ್ಷರಾಗಿ ಪುತ್ತೂರಿನ ಗಣೇಶೋತ್ಸವನ್ನು ಜಿಲ್ಲೆಯಲ್ಲೇ ಗುರುತಿಸುವಂತೆ ಮಾಡಿದ ಉದ್ಯಮಿ ಶಶಾಂಕ್ ಕೋಟೆಚಾರನ್ನೂ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಲಾಗಿದೆ. ಪುತ್ತೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದ ಚುನಾವಣೆಯ ಸಮಯದಲ್ಲಿ ಪುತ್ತಿಲ ಪರ ದುಡಿದ ಬಹುತೇಕ ಎಲ್ಲರನ್ನೂ ಹೊಸ ಸಮಿತಿಯಿಂದ ದೂರವಿಡಲಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಲೋಕಸಭಾ ಚುನಾವಣೆಗೆ ಮುಂಚೆ ಪುತ್ತಿಲ ಪರಿವಾರ ಹಾಗೂ ಬಿಜೆಪಿಯನ್ನು ಒಗ್ಗೂಡಿಸಲು ದೆಹಲಿ ಮಟ್ಟದಲ್ಲೇ ಹೈಕಮಾಂಡ್ ತಯಾರಿಯಲ್ಲಿರುವಾಗ, ಒಗ್ಗಟ್ಟಾಗಲೆಬಾರದೆಂದು ಪುತ್ತೂರಿನ ಕೆಲವರ ನಿರ್ಧಾರಗಳ ಮೂಲಕ ನಡೆದ ಈ ಬೆಳವಣಿಗೆಯೂ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಜೂ.2 ರಂದು ಪುತ್ತೂರಿನ ಆದರ್ಶ ಆಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿ ಘೋಷಿಸಲಾಗಿದೆ. ಸಮಿತಿ ಗೌರವ ಅಧ್ಯಕ್ಷರಾಗಿ ಡಾ.ಎಂ ಕೆ ಪ್ರಸಾದ್, ಅಧ್ಯಕ್ಷರಾಗಿ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷರಾಗಿ ರಾಧಾಕೃಷ್ಣ ನಂದಿಲ ಅವರನ್ನು ಆಯ್ಕೆ ಮಾಡಲಾಯಿತು.

ಅರುಣ್ ಪುತ್ತಿಲ ಮತ್ತು ಶಶಾಂಕ್ ಕೊಟೇಚಾ ನೇತೃತ್ವದಲ್ಲಿ ಪುತ್ತೂರಿನ ಗಣೇಶೋತ್ಸವ ಎರಡು ಜಿಲ್ಲೆಗಳಲ್ಲಿ ಅತ್ಯಂತ ವೈಭವದ ಉತ್ಸವವಾಗಿ ಹೊರಹೊಮ್ಮಿತ್ತು. ಉಡುಪಿ, ಮಂಗಳೂರಿನಿಂದ ಸ್ತಬ್ಧಚಿತ್ರಗಳು ಬರುತ್ತಿದ್ದವು. ಈಗ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಬಿಕ್ಕಟ್ಟಿನ ಕಾರಣಕ್ಕೆ ಸಂಘ ಪರಿವಾರದಲ್ಲಿ ಎರಡು ಬಣ ಸೃಷ್ಟಿಯಾಗಿದೆ. ಇದೇ ರೀತಿ ಹೋದಲ್ಲಿ ಲೋಕಸಭೆ ಚುನಾವಣೆ ಹೊತ್ತಿಗೆ ಇದರ ಬಿಸಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ.

- Advertisement -

Related news

error: Content is protected !!