ಸಂಜೀವ ಮಠಂದೂರು ಫೇಸ್ಬುಕ್ ಖಾತೆ ವಿರುದ್ಧ ಪ್ರಕರಣ ದಾಖಲು




ಪುತ್ತೂರು: ದರ್ಬೆಯಲ್ಲಿ ಆ.21 ರಂದು ಅಂಗಡಿಯೊಂದರಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದ ಮೂಲಕ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವ ಸಂದೇಶವನ್ನು ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದ ಮೇಲೆ ಸಂಜೀವ ಮಠಂದೂರು ಎಂಬ ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
“Sanjeeva Matandoor” ಎಂಬ ಫೇಸ್‌ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯು ಸಾಮಾಜಿಕ ಜಾಲತಾಣದ ಮೂಲಕ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕ ವಲಯದಲ್ಲಿ ಭಯ ಉಂಟು ಮಾಡುವಂತಹ ಸಂದೇಶವನ್ನು ಪ್ರಸಾರ ಮಾಡುವ ಮೂಲಕ ಬಂದ್‌ಗೆ ಕರೆ ಕೊಟ್ಟು, ಜನರು ಅಕ್ರಮ ಕೂಟ ಸೇರಿ ಕಾನೂನುಬಾಹಿರ ಕೃತ್ಯ ಎಸಗಲು ದುಷ್ಪ್ರೇರಣೆ ನೀಡಿರುವುದು ಕಂಡುಬಂದಿದೆ.
ಸಂದೇಶವನ್ನು ಪ್ರಸಾರ ಮಾಡಿದ “Sanjeeva Matandoor” ಫೇಸ್ ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 102/2026, ಕಲಂ: 353(2), 57, 189 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಪ್ರತಿಯೊಬ್ಬರಿಗೂ ಪ್ರತಿಭಟನೆ ನಡೆಸುವ ಹಕ್ಕಿದ್ದು, ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ನೀಡಲಾಗುವುದು. ಆದರೆ ಪ್ರತಿಭಟನೆಯ ದಿನಾಂಕ ಮತ್ತು ಸಮಯವನ್ನು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವಂತಹ ಯಾವುದೇ ಅನ್ಯ ಉದ್ದೇಶದಿಂದ ನಿಗದಿಪಡಿಸಿರುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಪೊಲೀಸ್ ಇಲಾಖೆಯು ಸೂಕ್ತ ಕಾನೂನು ಕ್ರಮ ಜರುಗಿಸಲಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.








