Monday, April 29, 2024
spot_imgspot_img
spot_imgspot_img

ಪುತ್ತೂರು:‌ ಪತಿಯ ಸಾಲದ ಮರುಪಾವತಿಯಾಗದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಪತ್ನಿ- ಮೃತ ದೇಹವನ್ನು ಹೊರ ಕೊಂಡೊಯ್ದಂತೆ ಮನೆ ಮುಟ್ಟುಗೋಲು ಮಾಡುವ ಉದ್ದೇಶದಿಂದ ಬೀಗ ಜಡಿದು ಸೀಲ್ ಹಾಕಿ ಅಮಾನವೀಯತೆ ಮೆರೆದ ಬ್ಯಾಂಕ್ ಸಿಬ್ಬಂದಿಗಳು!

- Advertisement -G L Acharya panikkar
- Advertisement -

ಪುತ್ತೂರು:‌ ಮನೆಯೊಂದನ್ನು ಪತಿಯ ಸಾಲದ ಮರುಪಾವತಿಯಾಗದ ಹಿನ್ನೆಲೆ ರಾಷ್ಟ್ರೀಕೃತ ಬ್ಯಾಂಕೊಂದರ ಸಿಬ್ಬಂದಿಗಳು ಹಾಗೂ ಸೀಜರ್ ಆಗಮಿಸಿ ಬಲವಂತವಾಗಿ ಜಪ್ತಿಗೆ ಯತ್ನಿಸಿದಾಗ ಶಾಕ್ ಗೆ ತುತ್ತಾದ ಮನೆಯೊಡತಿ ಆತ್ಮಹತ್ಯೆಗೆ ಶರಣಾದ ಧಾರುಣ ಘಟನೆ ಪುತ್ತೂರಿನ ಹೊರವಲಯದ ಹಾರಾಡಿ ಎಂಬಲ್ಲಿ ನಡೆದಿದೆ.

ರಘುವೀರ್‌ ಪ್ರಭು ಎಂಬವರ ಪತ್ನಿ ಪ್ರಾರ್ಥನಾ (52) ಆತ್ಮಹತ್ಯೆ ಮಾಡಿಕೊಂಡ ಮಹಿಳೆ, ‘ನನ್ನ ಸಾವಿಗೆ ಬ್ಯಾಂಕ್‌ನವರ ಕಿರುಕುಳ, ಮಾನಸಿಕ ಹಿಂಸೆ ಕಾರಣ ಇದನ್ನು ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಡೆತ್ ನೋಟ್ ಬರೆದಿಟ್ಟು ಮನೆಯ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಘುವೀರ್ ಪ್ರಭು ರವರು ರಾಷ್ಟ್ರೀಕೃತ ಬ್ಯಾಂಕ್ ನಿಂದ ಸಾಲ ಪಡೆದಿದ್ದರು. ಅದು ಸಮರ್ಪಕವಾಗಿ ಮರುಪಾವತಿಯಾಗದ ಹಿನ್ನಲೆಯಲ್ಲಿ ಬ್ಯಾಂಕ್ ನೋಟೀಸ್ ಕಳುಹಿಸಿತ್ತು, ಈ ಹಿನ್ನಲೆ ಮನೆ ಮುಟ್ಟುಗೋಲು ಹಾಕಲು ಬ್ಯಾಂಕ್ ಸಿಬಂದಿಗಳು ಬ್ಯಾಂಕ್ ಸೀಜರ್ ಜೊತೆ ಆಗಮಿಸಿದ್ದಾರೆ. ಜಪ್ತಿ ಸಂದರ್ಭದಲ್ಲಿ ರಕ್ಷಣೆ ಒದಗಿಸಲು ಪುತ್ತೂರು ಠಾಣೆ ಪೊಲೀಸ್ ಸಿಬಂದಿಗಳು ಬ್ಯಾಂಕ್ ಸಿಬಂದಿಗಳ ಜತೆ ಆಗಮಿಸಿದ್ದರು. ಈ ಸಂದರ್ಭ ಮನೆಯಲ್ಲಿ ರಘುವೀರ್‌ ಪ್ರಭು ಅವರ ಪತ್ನಿ ಪ್ರಾರ್ಥನಾ ಹಾಗೂ ಅವರ ಇಬ್ಬರು ಮಕ್ಕಳು ಮಾತ್ರ ಇದ್ದರು.

ಆತ್ಮಹತ್ಯೆಗೆ ಶರಣಾದ ಪ್ರಾರ್ಥನಾ ಪ್ರಭು,ರಘುವೀರ ಪ್ರಭು ರವರ ಮಕ್ಕಳು ಪ್ರಕರಣ ನ್ಯಾಯಾಲಯದಲ್ಲಿರುವಾಗ ಮುಟ್ಟುಗೋಲು ಹಾಕದಂತೆ ಬ್ಯಾಂಕ್ ಮತ್ತು ಕೋರ್ಟು ಕಮೀಷನರ್ ಅಧಿಕಾರಿಗಳೊಂದಿಗೆ ವಿನಂತಿಸಿದ್ದಾರೆನ್ನಲಾಗಿದೆ. ಇದನ್ನು ತಿರಸ್ಕರಿಸಿದ ಬ್ಯಾಂಕ್‌ನವರು ಮನೆಯ ಹಿಂಬದಿಯ ಬೀಗವನ್ನು ಒಡೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ಇದೇ ಕ್ಷಣದಲ್ಲಿ ಮನೆಯೊಳಗಿದ್ದ ಪ್ರಾರ್ಥನಾ ಪ್ರಭು ರವರು ಮನೆಯೊಳಗಿನಿಂದ ಲಾಕ್ ಮಾಡಿ ಕೊಠಡಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬ್ಯಾಂಕ್ ಮುಟ್ಟುಗೋಲಿಗೆ ಭದ್ರತೆ ಒದಗಿಸಲು ಬಂದ ಪೊಲೀಸರು ನೇಣು ಬಿಗಿದ ಸ್ಥಿತಿಯಲ್ಲಿದ್ದ ಪ್ರಾರ್ಥನಾ ಪ್ರಭು ರವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಮಹಿಳೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭ ಮನೆಯವರ ಬ್ಯಾಗನ್ನು ಹೊರಗಡೆ ಇಟ್ಟು ಬ್ಯಾಂಕ್ ಸಿಬಂದಿ ಹಾಗೂ ಸೀಜರ್ ಮನೆ ಮುಟ್ಟುಗೋಲು ಮಾಡುವ ಉದ್ದೇಶದಿಂದ ಮನೆಯ ಹಿಂಬದಿಯ ಬಾಗಿಲಿಗೆ ಬೀಗ ಹಾಕಿ ಸೀಲ್ ಹಾಕಿ, ಮನೆಯ ಆವರಣದ ಗೇಟ್ ಬಳಿಯೂ ಮನೆ ಮುಟ್ಟುಗೋಲು ಮಾಡಲಾಗಿದೆ ಎಂಬ ಬ್ಯಾನರ್ ಹಿಡಿದು ಪೊಟೋ ಕ್ಲಿಕಿಸಿ, ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭ ಮನೆಗೆ ಆಗಮಿಸಿದ ರಘುವೀರ್ ಪ್ರಭು ರವರು “ಸಾಲದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಬ್ಯಾಂಕ್ ನವರು ಜಪ್ತಿ ಮಾಡಿರುವ ಮನೆ ನನ್ನ ಇಬ್ಬರು ಮಕ್ಕಳ ಹೆಸರಿನಲ್ಲಿರುವ ಆಸ್ತಿ, ಅವರಿಗೂ ಈ ಮನೆಗೂ ಸಾಲಕ್ಕೂ ಯಾವುದೇ ಸಂಬಂಧವಿಲ್ಲ ಸಾಲಗಾರರಲ್ಲದ ನನ್ನ ಮಕ್ಕಳಿಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡುವುದು ಕಾನೂನು ಬಾಹಿರ ಎಂದು ಬ್ಯಾಂಕ್ ಸಿಬಂದಿಗಳಲ್ಲಿ ತಿಳಿಸಿದ್ದಾರೆ.ಮನೆ ಜಪ್ತಿಯ ವಿಚಾರದಲ್ಲಿಯೇ ಮನೆಯ ಸದಸ್ಯರೊಬ್ಬರ ಸಾವು ಸಂಭವಿಸಿದರೂ, ಅದೇ ಸಮಯ ಮನೆಯಲ್ಲಿದ್ದ ಮಕ್ಕಳನ್ನು ಹೊರ ಹಾಕಿ ಬೀಗ ಜಡಿದಿರುವ ಬ್ಯಾಂಕ್ ನ ವರ್ತನೆ ಅಮಾನವೀಯ ಕೃತ್ಯ. ಮೃತರ ಅಂತಿಮ ವಿಧಿ ವಿಧಾನಗಳನ್ನು ಪೂರೈಸಲು ಮನೆಯನ್ನು ಬಿಟ್ಟು ಕೊಡದೆ , ಮನೆಯವರನ್ನು ಬೀದಿಪಾಲು ಮಾಡಿ ಬ್ಯಾಂಕ್ ಕ್ರೌರ್ಯ ಪ್ರದರ್ಶಿಸುತ್ತಿದೆ ಎಂದು ಅಲ್ಲಿ ಸೇರಿದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೆ ಸಂದರ್ಭ ಸ್ಥಳಕ್ಕೆ ಆಗಮಿಸಿದ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ಅವರು ಜೀವ ಹೋದ ಮೇಲೂ ಮನೆ ಸೀಸ್ ಮಾಡುವುದು ಸರಿಯಲ್ಲ. ಮಾನವೀಯತೆ ಇರಲಿ ಎಂದರು. ಬ್ಯಾಂಕ್ ಅಧಿಕಾರಿ ಬಂದು ಮನೆ ಸೀಸ್ ಮಾಡಿದ ಕೀ ಅನ್ನು ರಘುವೀರ್ ಅವರ ಮಕ್ಕಳಿಗೆ ಹಸ್ತಾಂತರ ಮಾಡಿ ತೆರಳಿದರು.

ಸ್ಥಳಕ್ಕೆ ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್.ಐ ಜಂಬುರಾಜ್ ಮಹರಾಜ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ರಾಧಾಕೃಷ್ಣ ಭಕ್ತ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರ ಯುವಮೋರ್ಚಾದ ಅಧ್ಯಕ್ಷ ಸಚಿನ್ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕಾಮತ್, ಸದಾಶಿವ ಪೈ ಸೇರಿದಂತೆ ಹಲವಾರು ಮಂದಿ ಮನೆಯವರನ್ನು ಸಮಾಧಾನ ಪಡಿಸಿದರು. ಅಲ್ಲದೇ ಬ್ಯಾಂಕ್‌ನ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದರು. ಘಟನೆಯ ಕುರಿತು ಮೃತರ ಪತಿ ರಘುವೀರ್ ಪ್ರಭು ರವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!