ಪುತ್ತೂರು: ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾಗಿದ್ದಾನೆ ಮತ್ತು ಅತ್ಯಾಚಾರ ಮಾಡಿದ್ದಾನೆ ಎನ್ನಲಾದ ಪ್ರಕರಣದ ಆರೋಪಿ ಹರೀಶ್ ಯಾನೆ ಹರ್ಷರವರಿಗೆ ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಅ.೧೧ರಂದು ಪುತ್ತೂರು ಕೇಪುಳು ನಿವಾಸಿಯೊಬ್ಬರ ಮಗಳು ಕೆಲಸಕ್ಕೆ ತೆರಳಿದವಳು ಮರಳಿ ಬಾರದೇ ಇದ್ದುದರಿಂದ, ಆಕೆಯ ತಂದೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಪುತ್ರಿಯೊಂದಿಗೆ ಆರೋಪಿಯು ಶೇರ್ ಚಾಟ್ ಮುಖಾಂತರ ಪರಿಚಯವಾಗಿ, ನಂತರ ಒಬ್ಬರನ್ನೊಬ್ಬರು ಪ್ರೀತಿಸಿಕೊಂಡಿದ್ದರು ಎಂಬ ವಿಚಾರ ತಿಳಿದು, ಆರೋಪಿಯೆ ತನ್ನ ಮಗಳನ್ನು ಕರೆದುಕೊಂಡು ಹೋಗಿರುವುದಾಗಿ ಸಂಶಯಗೊಂಡು ಆತನ ವಿರುದ್ದ ದೂರು ನೀಡಿದ್ದರು.

ಪೊಲೀಸರು ಆರೋಪಿಯನ್ನು ಬಂಧಿಸಿ, ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ್ದಾನೆ ಮತ್ತು ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಆರೋಪಿ ಹರೀಶ್ ಯಾನೆ ಹರ್ಷರವರು ತನ್ನ ಪರ ವಕೀಲರಾದ ಮಹೇಶ್ ಕಜೆಯವರು ಮುಖಾಂತರ ಪುತ್ತೂರಿನ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ವಾದ-ವಿವಾದವನ್ನು ಆಲಿಸಿದ ಪುತ್ತೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜಾಮೀನು ಮಂಜೂರು ಮಾಡಿದೆ.










