Saturday, July 5, 2025
spot_imgspot_img
spot_imgspot_img

ಒಡಿಯೂರು ’ತುಳುಸಿರಿ’ ಮಾನಾದಿಗೆ; ಪುತ್ತೂರು ಗ್ರಾಮಾಂತರ ಠಾಣಾ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ರೈ ಆಯ್ಕೆ

- Advertisement -
- Advertisement -

ಪುತ್ತೂರು: ತುಳು ಭಾಷೆ ಸಂಸ್ಕೃತಿಯ ಜಾಗೃತಿಗಾಗಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ ಆಶ್ರಯದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಫೆ. 7 ರಂದು ನಡೆಯುವ ತುಳುನಾಡ ಜಾತ್ರೆ ಒಡಿಯೂರು ರಥೋತ್ಸವ ಹಾಗೂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಕೊಡಮಾಡುವ ’ತುಳುಸಿರಿ’ ಮಾನಾದಿಗೆ ಪುತ್ತೂರು ಗ್ರಾಮಾಂತರ ಠಾಣಾ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ರೈ ನಡುಕೂಟೇಲುರವರು ಆಯ್ಕೆಯಾಗಿದ್ದಾರೆ.

ವಿಶ್ವನಾಥ ರೈ ನಡುಕೂಟೇಲು ಮತ್ತು ಲೀಲಾವತಿ ರೈ ದಂಪತಿಗಳ ಪುತ್ರನಾದ ಪ್ರವೀಣ್ ರೈ ಇವರು ಕಡಬ ತಾಲೂಕು ಪಾಲ್ತಾಡಿ ಗ್ರಾಮದ ನಡುಕೂಟೇಲು ನಿವಾಸಿಯಾಗಿರುತ್ತಾರೆ. ಇವರು 2008 ನೇ ಇಸವಿಯಲ್ಲಿ ಪೊಲೀಸ್ ಇಲಾಖೆ ಸೇರಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆ, ವಿಟ್ಲ ಪೊಲೀಸ್ ಠಾಣೆ, ಉಪ್ಪಿನಂಗಡಿ ಪೊಲೀಸ್ ಠಾಣೆ, ಅಪರಾಧ ಪತ್ತೆ ದಳ ದ.ಕ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಹೆಡ್ ಕಾನ್ಸ್ಟೇಬಲ್ ಆಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತಿದ್ದಾರೆ.

ಇವರು ವಿಟ್ಲದಲ್ಲಿ ನಡೆದ ಸುಬಾಸ್ ನಾಯಕ್ ರವರ ದರೋಡೆ ಪ್ರಕರಣ, ಅಡ್ಯನಡ್ಕ ಬ್ಯಾಂಕ್ ರಾಬರಿ ಪ್ರಕರಣ, ಬಂಟ್ವಾಳ ವಗ್ಗದಲ್ಲಿ ನಡೆದ ದರೋಡೆ ಪ್ರಕರಣ, ಸಂಪ್ಯ ಠಾಣಾ ವ್ಯಾಪ್ತಿಯ ಗುರುಪ್ರಸಾದ್ ಕುದ್ಮಾಡಿರವರ ಮನೆ ದರೋಡೆ ಪ್ರಕರಣ, ಉಪ್ಪಿನಂಗಡಿ ಆರ್.ಕೆ ಜ್ಯುವೇಲ್ಲರ್ಸ್ ದರೋಡೆ ಪ್ರಕರಣ, ಇಚಿಲಂಪಾಡಿ ಮನೆ ದರೋಡೆ ಪ್ರಕರಣ, ಉಜಿರೆಯ ಮಗು ಅಪಹರಣ ಪ್ರಕರಣ ಜಲೀಲ್ ಕರೋಪಾಡಿ ಕೊಲೆ ಪ್ರಕರಣ, ಶರತ್ ಮಡಿವಾಳ ಕೊಲೆ ಪ್ರಕರಣ, ಬೆಳ್ಳಾರೆ ಇಸ್ಮಾಯಿಲ್ ಕೊಲೆ ಪ್ರಕರಣ, ಸುಳ್ಯ ಸಂಪತ್ ಕೊಲೆ ಪ್ರಕರಣ, ಉಪ್ಪಿನಂಗಡಿ ಉನ್ನಿಕೃಷ್ಣನ್ ಕೊಲೆ ಪ್ರಕರಣ, ಹಾಗೂ ಜಿಲ್ಲೆಯನ್ನೆ ಬೆಚ್ಚಿ ಬಿಳಿಸಿದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ, ಈಶ್ವರಮಂಗಲದಲ್ಲಿ ನಡೆದ ಮೈಸೂರಿನ ನಿವಾಸಿ ಪೋಟೊಗ್ರಾಫರ್ ಜಗದೀಶ್ ಕೊಲೆ ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ನಡೆದಂತಹ ಅನೇಕ ಘೋರ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರ ವಿಶೇಷ ತಂಡದಲ್ಲಿ ಕಾರ್ಯನಿರ್ವಹಿಸಿರುತ್ತಾರೆ. ಅದಲ್ಲದೇ, ಜಿಲ್ಲೆಯಲ್ಲಿ ನಡೆದಂತಹ ವಿವಿಧ ಕಳ್ಳತನ ಪ್ರಕರಣಗಳನ್ನು ಬೇದಿಸುವ ತಂಡದಲ್ಲಿ ಇವರ ಪಾತ್ರ ಮಹತ್ವವಾಗಿರುತ್ತದೆ.

ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಎನ್.ಐ.ಎ ತಂಡದಲ್ಲಿ 1 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಂದ 40 ಕ್ಕೂ ಹೆಚ್ಚು ಪ್ರಶಂಸನಾ ಪತ್ರ ಹಾಗೂ ಸುಮಾರು 35000/- ನಗದು ಬಹುಮಾನ ಹಾಗೂ ಪೊಲೀಸ್ ಮಹಾನಿರೀಕ್ಷಕರು ಪಶ್ಚಿಮ ವಲಯ ಮಂಗಳೂರು ಇವರಿಂದ 4 ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ದೊರೆತಿರುತ್ತದೆ. ಅಲ್ಲದೇ ಇವರ ಸೇವೆಯನ್ನು ಗುರುತಿಸಿ ಸಾರ್ವಜನಿಕರಿಂದ 55 ಕ್ಕಿಂತಲೂ ಹೆಚ್ಚು ಸನ್ಮಾನ ನಡೆದಿರುತ್ತದೆ. ಇವರ ದಕ್ಷ ಸೇವೆಯನ್ನು ಗುರುತಿಸಿ ” 2021 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಕೊಡುವ ಅತ್ಯುತ್ತಮ ಪ್ರಶಸ್ತಿ ಆದ ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಆಗಿನ ಮುಖ್ಯಮಂತ್ರಿ ಸನ್ಮಾನ್ಯ ಯಡಿಯೂರಪ್ಪ ರವರು ನೀಡಿರುತ್ತಾರೆ.” ಹಾಗೂ ಇವರು ಸಮಾಜಮುಖಿ ಕೆಲಸ ಕಾರ್ಯ ಮಾಡಿಕೊಂಡಿದ್ದು, ವಿವಿಧ ದೇವಸ್ಥಾನಗಳ ಬ್ರಹ್ಮಕಲೋಶೋತ್ಸವ ಸಮಿತಿಯಲ್ಲಿ ಅಲ್ಲದೇ ಸಂಘ ಸಂಸ್ಥೆಯಲ್ಲಿ ಊರಿನ ಅಭಿವೃದ್ಧಿಯಲ್ಲಿ ಕೈಜೋಡಿಸಿ ಕೆಲಸ ಮಾಡಿಕೊಂಡಿರುತ್ತಾರೆ.

- Advertisement -

Related news

error: Content is protected !!