



ಪುತ್ತೂರು: ದರ್ಬೆ ಸಮೀಪ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಸಂಚಾರಿ ಪೊಲೀಸರು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ 2283, ಶ್ರೀ ಶೈಲ ಎಂ ಕೆ ಎಂಬವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಆಟೋ ಚಾಲಕ ಬಶೀರ್ ಎಂಬವರು ಸಮವಸ್ತ್ರ ಧರಿಸದೇ ಆಟೋ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪುತ್ತೂರು ಸಂಚಾರ ಪೊಲೀಸ್ ಠಾಣಾ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ 2283, ಶ್ರೀ ಶೈಲ ಎಂ ಕೆ. ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದ್ದರೂ, ಚಾಲಕ ತನ್ನ ವಾಹನವನ್ನು ನಿಲ್ಲಿಸದೇ ವೇಗವಾಗಿ ಚಲಾಯಿಸಿಕೊಂಡು ಬಂದು ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಮಾಡಿರುತ್ತಾನೆ. ಈ ಕುರಿತು ಆತನನ್ನು ಹಿಂಬಾಲಿಸಿ ವಾಹನವನ್ನು ತಡೆದು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿರುತ್ತದೆ. ಇದನ್ನು ಪರಿಶೀಲಿಸಿ ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದ ವಿಡಿಯೋ ದೃಶ್ಯಾವಳಿಯನ್ನು ವೀಕ್ಷಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದ್ದು, ವಿಡಿಯೋದಲ್ಲಿ ಇಬ್ಬರು ಪೊಲೀಸರ ಕೃತ್ಯ ತಪ್ಪು ಎಂದು ಸ್ಪಷ್ಟವಾಗಿ ತೋರುತ್ತಿದ್ದು, ಘಟನೆಯ ಕಾರಣವನ್ನು ಪರಿಶೀಲಿಸಲಾಗುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದರು.








