Friday, April 26, 2024
spot_imgspot_img
spot_imgspot_img

ಪುತ್ತೂರು: ಚಿನ್ನಾಭರಣವನ್ನು ಪಾಲಿಶ್‌ ಮಾಡಿ ಕೊಡುವುದಾಗಿ ನಂಬಿಸಿ ಐದೂವರೆ ಪವನ್‌ ಚಿನ್ನ ಕರಗಿಸಿದ ವಂಚಕ; ದೂರು ದಾಖಲು!

- Advertisement -G L Acharya panikkar
- Advertisement -
driving

ಪುತ್ತೂರು: ಚಿನ್ನಾಭರಣಕ್ಕೆ ಹೊಳಪು ನೀಡುವುದಾಗಿ ಹೇಳಿ 2 ಪವನ್‌ನ ಮಾಂಗಲ್ಯ ಸರ ಸೇರಿದಂತೆ ಐದೂವರೆ ಪವನ್‌ ಚಿನ್ನಾಭರಣವನ್ನು ಕಳೆದುಕೊಂಡಿರುವ ಘಟನೆ ಸಂಪ್ಯ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಂಚನೆಗೊಳಗಾದ ಮಹಿಳೆ ನೆಟ್ಟಣಿಗೆ ಮುಟ್ನೂರು ಗ್ರಾ.ಪಂ. ಸದಸ್ಯೆ ಪೆರ್ನಾಜೆ ನಿವಾಸಿ ಇಂದಿರಾ ಎನ್ನಲಾಗಿದೆ.

ಚಿನ್ನಾಭರಣವನ್ನು ಹೊಳೆಯುವಂತೆ ಪಾಲಿಶ್‌ ಮಾಡಿ ಕೊಡುವುದಾಗಿ ನಂಬಿಸಿ ಪಡೆದುಕೊಂಡ
ಅಪರಿಚಿತ ಯುವಕನೊಬ್ಬ ಮನೆಯ ಶೋಕೇಸ್‌, ಟಿವಿ, ಬೆಳ್ಳಿ, ಬಂಗಾರದ ಆಭರಣ ಸೇರಿದಂತೆ ಹಲವು ವಸ್ತುಗಳನ್ನು ಸ್ವಚ್ಛಗೊಳಿಸಿ ಹೊಳಪು ನೀಡುವ ಪೌಡರ್‌ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡು ಇಂದಿರಾ ಅವರ ಮನೆಗೆ ಬಂದಿದ್ದಾನೆ.

ಈ ವೇಳೆ ಆತ ಬೆಳ್ಳಿ, ಚಿನ್ನಾಭರಣವನ್ನು ಹೊಳೆಯುವಂತೆ ಈಗಲೇ ಪಾಲಿಶ್‌ ಮಾಡಿಕೊಡುವ ಮೂಲಕ ನಿಮಗೆ ಮಾದರಿ ತೊರಿಸುವುದಾಗಿ ತಿಳಿಸಿದ್ದು,ಇದನ್ನು ನಂಬಿದ ಇಂದಿರಾ ಅವರು ತಮ್ಮ ಬಳಿಯಿದ್ದ ಕಾಲಿನ ಗೆಜ್ಜೆ ತೆಗೆದುಕೊಟ್ಟಿದ್ದರು. ಅದನ್ನು ಆ ವ್ಯಕ್ತಿ ಹಳದಿ ಪೌಡರ್‌ ಬಳಸಿ ಫಳಫಳ ಹೊಳೆಯುವಂತೆ ಮಾಡಿಕೊಟ್ಟಿದ್ದನು.

ಬಳಿಕ ಚಿನ್ನದ ಆಭರಣಗಳಿದ್ದರೆ ಅವುಗಳನ್ನೂ ಹೊಳೆಯುವಂತೆ ಮಾಡಿಕೊಡುತ್ತೇನೆಂದು ನಂಬಿಸಿದ್ದು, ಈ ವೇಳೆ ಇಂದಿರಾ ಅವರು ತಮ್ಮ ಮಾಂಗಲ್ಯ ಸರ, ಚೈನು, ಎರಡು ಬಳೆ ನೀಡಿದ್ದಾರೆ. ಆ ಪರಿಚಿತ ಯುವಕ ಚಿನ್ನಾಭರಣಗಳ ಮೇಲೆ ಹಳದಿ ಪೌಡರ್‌ ಸುರಿದು, ಲಿಕ್ವಿಡ್‌ ಮತ್ತು ಜೆಲ್‌ ಹಾಕಿ ಬ್ರಷ್‌ ಬಳಸಿ ತೊಳೆಯುವಂತೆ ನಟಿಸಿ ಬಳಿಕ ಬ್ಯಾಟರಿ ಚಾಲಿತ ಬೆಂಕಿ ನೀರಲ್ಲಿ ಕುದಿಸಿದ್ದಾನೆ. ಬಳಿಕ ನೀರಿನಿಂದ ತೊಳೆದು ಅರಿಶಿನ ಪುಡಿ ಹಾಕಿ, ಪೇಪರ್‌ ಒಂದರಲ್ಲಿ ಪೊಟ್ಟಣ ಕಟ್ಟಿ ಕೊಟ್ಟಿದ್ದಾನೆ. ಅರ್ಧ ಗಂಟೆಯ ನಂತರವೇ ಪೊಟ್ಟಣ ತೆಗೆಯುವಂತೆ ಇಂದಿರಾ ಅವರಿಗೆ ತಿಳಿಸಿ, ವಂಚಕ ಅಲ್ಲಿಂದ ಪರಾರಿಯಾಗಿದ್ದಾನೆ.

ಆತನ ವರ್ತನೆಯಿಂದ ಅನುಮಾನಪಟ್ಟ ಇಂದಿರಾ ಅವರು ಪೊಟ್ಟಣ ತೆರೆದು ನೋಡಿದಾಗ ಮಾಂಗ್ಯಲ ಸರ ಸೇರಿದಂತೆ ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಂಡು ಬಂದಿದೆ. ಆರೋಪಿ 2 ಪವನ್‌ನ ಮಾಂಗಲ್ಯ ಸರ ಸೇರಿದಂತೆ ಸುಮಾರು ಐದೂವರೆ ಪವನ್‌ ಚಿನ್ನಾಭರಣವನ್ನು ಇಂದಿರಾ ಅವರ ಕಣ್ಣೆದುರೇ ವಂಚಿಸಿ ಪರಾರಿಯಾಗಿದ್ದಾನೆ. ಈ ಘಟನೆಯ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!