Thursday, April 25, 2024
spot_imgspot_img
spot_imgspot_img

ಪುತ್ತೂರು: ಮಹಿಳೆಯ ಕತ್ತಿನಿಂದ ಕರಿಮಣಿ ಸರ ಎಳೆದ ಪ್ರಕರಣ; ಚೆಕ್ ಪೋಸ್ಟಲ್ಲಿದ್ದ ಸಿಬ್ಬಂದಿಗಳ ಮೇಲೆ ಡಿವೈಎಸ್ಪಿ ಡಾ. ಗಾನ ಪಿ. ಕುಮಾರ್ ಗರಂ !

- Advertisement -G L Acharya panikkar
- Advertisement -

ಪುತ್ತೂರು: ಮನೆಗೆ ಹೋಗುತ್ತಿದ್ದ ಮಹಿಳೆಯ ಕತ್ತಿನಿಂದ ಕರಿಮಣಿ ಸರ ಎಳೆದ ಘಟನೆ ಕಬಕ ಸಮೀಪದ ತೆಂಕಿಲದಲ್ಲಿ ನಡೆದಿದೆ.

ಕಬಕ ಗ್ರಾಮದ ಪೆರಿಯತ್ತೋಡಿ ನಿವಾಸಿ ಗೋಪಾಲ ನಾಯ್ಕರವರ ಪತ್ನಿ ವಿಜಯರವರು ದರ್ಬೆ ಸಮೀಪ ಕ್ವಾಟ್ರಸ್‌ನಲ್ಲಿರುವ ಮಹಿಳಾ ಅಧಿಕಾರಿಯೋರ್ವರ ಮನೆ ಕೆಲಸ ನಿರ್ವಹಿಸಿ ತನ್ನ ಮನೆಗೆ ಹೋಗಲೆಂದು ನಡೆದುಕೊಂಡು ಹೋಗುತ್ತಿದ್ದು ತೆಂಕಿಲದ ಒಕ್ಕಲಿಗ ಗೌಡ ಸಮುದಾಯ ಭವನದ ಎದುರಿಗೆ ಅವರು ತಲುಪುತ್ತಿದ್ದಂತೆಯೇ ಹಿಂದಿನಿಂದ ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದ ಮೂವರು ಯುವಕರ ಪೈಕಿ ಓರ್ವ ಬೈಕ್‌ನಿಂದ ಕೆಳಗಿಳಿದು ವಿಜಯರವರ ಕುತ್ತಿಗೆಗೆ ಕೈ ಹಾಕಿ 60 ಸಾವಿರ ರೂ ಮೌಲ್ಯದ ಕರಿಮಣಿ ಸರವನ್ನು ಎಳೆದುಕೊಂಡು ಬೈಕ್‌ನಲ್ಲಿ ಮೂವರೂ ಪರಾರಿಯಾಗಿದ್ದರು.

ಈ ಯುವಕರು ಪೆರ್ಲಡ್ಕ ರಸ್ತೆ ಮೂಲಕ ಪರಾರಿಯಾಗಿದ್ದಾರೆ ಎಂದು ವಿಜಯರವರು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣವೇ ಪೊಲೀಸರು ಶೋಧ ಆರಂಭಿಸಿದ್ದರು. ಬೈಕ್‌ನಲ್ಲಿ ಬಂದು ಅಪರಿಚಿತ ಯುವಕರು ತನ್ನ ಕರಿಮಣಿ ದೋಚಿರುವ ಬಗ್ಗೆ ವಿಜಯರವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಡಹಗಲೇ ನಡೆದಿರುವ ಈ ಕೃತ್ಯವನ್ನು ಗಂಭಿರವಾಗಿ ಪರಿಗಣಿಸಿರುವ ಡಿವೈಎಸ್‌ಪಿ ಡಾ. ಗಾನ ಪಿ. ಕುಮಾರ್‌ರವರು ತನಿಖೆಯನ್ನು ಚುರುಕುಗೊಳಿಸುವಂತೆ ತನ್ನ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದರು.

ಈ ನಿಟ್ಟಿನಲ್ಲಿ ನಗರ ಠಾಣಾ ಇನ್ಸ್‌ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ಪೊಲೀಸರ ವಿಶೇಷ ತಂಡ ರಚಿಸಲಾಗಿದ್ದು ಯುವಕರಿಗಾಗಿ ಬಲೆ ಬೀಸಲಾಗಿದೆ. ಬೈಕ್‌ನಲ್ಲಿ ಬಂದು ಮಹಿಳೆಯ ಕರಿಮಣಿ ಸರ ಎಳೆದು ಪರಾರಿಯಾಗಿರುವ ಮೂವರು ಯುವಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಸಿಸಿ ಕೆಮರಾದ ದೃಶ್ಯಾವಳಿ ಆಧರಿಸಿ ಕೇರಳದ ಗಡಿಭಾಗವಾಗಿರುವ ಪಾಣಾಜೆಯವರೆಗೂ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು, ಯುವಕರು ಕೇರಳ ಗಡಿ ದಾಟಿರುವುದು ಕಂಡು ಬಂದಿದ್ದು, ಮಹಿಳೆಯರ ಕರಿಮಣಿ ಸರ ಎಳೆದಿರುವ ಪ್ರಕರಣದ ಬಗ್ಗೆ ಗರಂ ಆಗಿರುವ ಡಿ.ವೈ.ಎಸ್.ಪಿ. ಡಾ.ಗಾನ ಪಿ.ಕುಮಾರ್ ಅವರು ತನಿಖಾ ತಂಡಕ್ಕೆ‌ ಕ್ಲಾಸ್ ತೆಗೆದುಕೊಂಡಿದ್ದಾರೆ.

ಲಾಕ್ ಡೌನ್ ಜಾರಿಯಲ್ಲಿದ್ದರೂ ಒಂದೇ ಬೈಕಿನಲ್ಲಿ ಮೂವರು ಯುವಕರು ಹೇಗೆ ಪೇಟೆಗೆ ಬಂದರು, ವಾಪಸ್ ಹೇಗೆ ತೆರಳಿದರು, ಯಾವ ಚೆಕ್ ಪೋಸ್ಟ್ ದಾಟಿ ಅವರು ಬಂದರು, ಯಾವ ಚೆಕ್ ಪೋಸ್ಟ್ ದಾಟಿ ಹಿಂತಿರುಗಿದರು, ಆ ವೇಳೆ ಚೆಕ್‌ಪೋಸ್ಟಲ್ಲಿ‌ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಏನು ಮಾಡುತ್ತಿದ್ದರು, ತ್ರಿಬಲ್‌ ರೈಡ್ ಕೇಸ್ ದಾಖಲಿಸಿದ್ದಾರ ಅಥವಾ ಈ ಯುವಕರು ಬರುವುದನ್ನು‌ ಗಮನಿಸಿಯೇ ಇಲ್ಲವ, ಗೊತ್ತಾಗಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರ ಎಂದು‌ ಪ್ರಶ್ನಿಸಿದ್ದಾರೆ. ಈ‌ ನಿಟ್ಟಿನಲ್ಲಿ‌ ಪೊಲೀಸ್ ತಂಡ‌ ತನಿಖೆಯನ್ನು‌ ಇನ್ನಷ್ಟು ಚುರುಕುಗೊಳಿಸಿದೆ.

- Advertisement -

Related news

error: Content is protected !!