ಫರೀದಾಬಾದ್: ಮಧ್ಯರಾತ್ರಿ ಸರ್ಕಾರಿ ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿದ್ದರಿಂದ ಗರ್ಭಿಣಿಗೆ ಆಸ್ಪತ್ರೆಯ ಉದ್ಯಾನದಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಹರಿಯಾಣದ ಫರೀದಾಬಾದ್ ನಲ್ಲಿ ನಡೆದಿದೆ. ವೈದ್ಯರು ಹಾಗೂ ದಾದಿಯರು ನೆರವಿಗೆ ಲಭ್ಯವಾಗಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಸೆಕ್ಟರ್-3ರಲ್ಲಿರುವ 30 ಹಾಸಿಗೆಗಳ ಸಾಮರ್ಥ್ಯದ ‘ಫಸ್ಟ್ ರೆಫರಲ್ ಯೂನಿಟ್ ಆಸ್ಪತ್ರೆಯಲ್ಲಿ ಮೇ 16ರ ಮುಂಜಾನೆ ಸುಮಾರು 1.40ರ ವೇಳೆಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವೈದ್ಯಕೀಯ ಸಿಬ್ಬಂದಿ ಸ್ಪಂದಿಸದ ಕಾರಣ, ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಹೆರಿಗೆ ನಡೆಸಬೇಕಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
ಬದೋಲಿ ಜಿಲ್ಲೆಯ ನಿವಾಸಿಯಾದ ಬಲೇಶ್ ಅವರಿಗೆ ಪ್ರಸವ ವೇದನೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬದವರು ತಕ್ಷಣ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆಯ ಮುಖ್ಯ ದ್ವಾರಕ್ಕೆ ಬೀಗ ಹಾಕಲಾಗಿತ್ತು. ಇದರಿಂದ ಕುಟುಂಬದ ಸದಸ್ಯರು ನೆರವಿಗಾಗಿ ಬಾಗಿಲು ತಟ್ಟಿದರೂ ಹಾಗೂ ಕೂಗಿಕೊಂಡರೂ ಯಾವುದೇ ಸಿಬ್ಬಂದಿಯಿಂದ ಪ್ರತಿಕ್ರಿಯೆ ದೊರಕಲಿಲ್ಲ ಎಂದು ಆರೋಪಿಸಿದ್ದಾರೆ.ನಂತರ ಆಸ್ಪತ್ರೆಯ ಹಿಂಭಾಗದಲ್ಲಿದ್ದ ಮತ್ತೊಂದು ದ್ವಾರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕುಟುಂಬದವರು ಅದರ ಮೂಲಕ ಒಳ ಪ್ರವೇಶಿಸಿ ವೈದ್ಯರು ಹಾಗೂ ಸಿಬ್ಬಂದಿಯನ್ನು ಹುಡುಕಲು ಮುಂದಾದರು. ಆದರೆ ಪ್ರಸವ ವೇದನೆ ತೀವ್ರಗೊಂಡಿದ್ದ ಮಹಿಳೆಗೆ ನೆರವಾಗಲು ವೈದ್ಯರು, ದಾದಿಯರು ಅಥವಾ ಅಟೆಂಡರ್ ಗಳು ಯಾರೂ ಮುಂದೆ ಬರಲಿಲ್ಲ ಎಂದು ಕುಟುಂಬದವರು ದೂರಿದ್ದಾರೆ.
ಈ ನಡುವೆ ಮಹಿಳೆ ಆಸ್ಪತ್ರೆಯ ಉದ್ಯಾನದಲ್ಲೇ ಮಗುವಿಗೆ ಜನ್ಮ ನೀಡಿದರು. ಹೆರಿಗೆ ಮಾಡಿಸುವ ಅನುಭವವಿದ್ದ ಸಂಬಂಧಿಕ ಮಹಿಳೆಯೊಬ್ಬರು ನೆರವಿಗೆ ಧಾವಿಸಿದ್ದು, ಕುಟುಂಬದ ಸದಸ್ಯರು ಮೊಬೈಲ್ ಟಾರ್ಚ್ ಹಿಡಿದು ಸಹಕರಿಸಿದ್ದಾರೆ ಎಂದು ತಿಳಿದುಬಂದಿದೆ.’ನನ್ನ ಪತಿ ಮತ್ತು ಮೈದುನ ನೆರವಿಗಾಗಿ ನಿರಂತರವಾಗಿ ಕೂಗುತ್ತಿದ್ದರು. ಆದರೆ ಯಾರೂ ಸಹಾಯಕ್ಕೆ ಬರಲಿಲ್ಲ. ಆಸ್ಪತ್ರೆಯ ಸಿಬ್ಬಂದಿ ಬರುವಷ್ಟರಲ್ಲಿ ಹೆರಿಗೆ ಮುಗಿದಿತ್ತು’ ಎಂದು ಬಲೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.








