ಮಂಗಳೂರು: ಯಾವುದೇ ದಾಖಲಾತಿಗಳಿಲ್ಲದೆ ಕರ್ನಾಟಕ ರಾಜ್ಯದ ಹಾವೇರಿಯಿಂದ ಕೇರಳ ರಾಜ್ಯದ ತಲಿಪರಂಬು ಕಡೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕಂಕನಾಡಿ ನಗರ ಪೊಲೀಸರು ಪತ್ತೆಹಚ್ಚಿದ್ದು, 27 ಕೋಣಗಳನ್ನು ರಕ್ಷಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದಿನಾಂಕ 16-05-2026 ರಂದು ಬೆಳಿಗ್ಗೆ ಸುಮಾರು 6 ಗಂಟೆ ವೇಳೆಗೆ, ಜಪ್ಪಿನಮೊಗೆರಿ ಇಂಡಿಯಾನ ಹಾಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಹೈವೇ ಪೆಟ್ರೋಲ್ ಪೊಲೀಸರು ಹಾಗೂ ಕಂಕನಾಡಿ ನಗರ ಠಾಣಾ ಸಿಬ್ಬಂದಿ ಮಾರ್ನಿಂಗ್ ಗಸ್ತಿನಲ್ಲಿದ್ದ ವೇಳೆ ಈಚರ್ ಲಾರಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕೋಣಗಳನ್ನು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ತಕ್ಷಣ ವಾಹನವನ್ನು ತಡೆದು ಪರಿಶೀಲಿಸಿದಾಗ, ಯಾವುದೇ ಮಾನ್ಯ ದಾಖಲಾತಿಗಳಿಲ್ಲದೆ ಸುಮಾರು 27 ಕೋಣಗಳನ್ನು ಕೇರಳಕ್ಕೆ ಸಾಗಾಟ ಮಾಡುತ್ತಿರುವುದು ಪತ್ತೆಯಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಜಾನುವಾರು ಸಾಗಾಟಕ್ಕೆ ಬಳಸಿದ್ದ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಶಿವಮೊಗ್ಗ, ಹಾವೇರಿ ಹಾಗೂ ಹಾಸನ ಜಿಲ್ಲೆಯ ನಿವಾಸಿಗಳೆಂದು ಗುರುತಿಸಲಾಗಿದೆ.ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಸೆಕ್ಷನ್ 11(A), 11(D), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ-2020 ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ರಕ್ಷಿಸಲಾದ ಕೋಣಗಳನ್ನು ನ್ಯಾಯಾಲಯದ ಆದೇಶದಂತೆ ಗೋಶಾಲೆಗೆ ಹಸ್ತಾಂತರಿಸಲಾಗಿದೆ.








