
ಹೊಸದಿಲ್ಲಿ: ದೇಶಾದ್ಯಂತ ದ್ವೇಷ ಭಾಷಣವನ್ನು ತಡೆಯಲು ಹೆಚ್ಚುವರಿ ನಿರ್ದೇಶನಗಳನ್ನು ಹೊರಡಿಸಲು ಸರ್ವೋಚ್ಚ ನ್ಯಾಯಾಲಯವು ಬುಧವಾರ ನಿರಾಕರಿಸಿದೆ.
ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳು ಸಾಕಷ್ಟಿವೆ ಎಂದು ಹೇಳಿದ ಅದು, ಕಾನೂನಿನ ಕೊರತೆ ಸಮಸ್ಯೆಗೆ ಕಾರಣವಲ್ಲ, ಬದಲಿಗೆ ಅದರ ಅನುಷ್ಠಾನದ ಕೊರತೆ ಎಂದು ಅದು ಬೆಟ್ಟು ಮಾಡಿದೆ.ಅಪರಾಧಗಳಿಗೆ ಸಂಬಂಧಿಸಿದಂತೆ ಶಾಸಕಾಂಗವು ಸಂಪೂರ್ಣ ಅಧಿಕಾರವನ್ನು ಹೊಂದಿದೆ.
ಸಾಂವಿಧಾನಿಕ ನ್ಯಾಯಾಲಯಗಳು ಕಾನೂನನ್ನು ವ್ಯಾಖ್ಯಾನಿಸಬಹುದೇ ಹೊರತು ಹೊಸ ಕಾನೂನು ರಚಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಅವು ಸುಧಾರಣೆಯ ಅಗತ್ಯವನ್ನು ಸೂಚಿಸಬಹುದು. ಕಾನೂನು ರೂಪಿಸುವುದರ ಕುರಿತು ಅಂತಿಮ ನಿರ್ಧಾರವು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಬಳಿಯಿರುತ್ತದೆ ಎಂದು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಸಂದೀಪ ಮೆಹ್ತಾ ಅವರ ಪೀಠವು ಅಭಿಪ್ರಾಯಿಸಿತು. ದ್ವೇಷ ಭಾಷಣವು ಅನಿಯಂತ್ರಿತವಲ್ಲ ಮತ್ತು ಇಂತಹ ಪ್ರಕರಣಗಳನ್ನು ಎದುರಿಸಲು ಶಾಸನಬದ್ಧ ಕಾರ್ಯವಿಧಾನಗಳು ಅಸ್ತಿತ್ವದಲ್ಲಿವೆ ಎಂದು ಪೀಠವು ಹೇಳಿತು.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಈಗಾಗಲೇ ಕ್ರಿಮಿನಲ್ ಕಾನೂನಿಗೆ ಚಾಲನೆ ನೀಡಲು ಸಮಗ್ರ ಚೌಕಟ್ಟನ್ನು ಒದಗಿಸಿದೆ ಮತ್ತು ಯಾವುದೇ ಕಾನೂನು ಶೂನ್ಯತೆ ಇಲ್ಲ. ಅಸ್ತಿತ್ವದಲ್ಲಿರುವ ಕಾನೂನು ವ್ಯವಸ್ಥೆಯಡಿ ದಂಡಾಧಿಕಾರಿಗಳೂ ವ್ಯಾಪಕ ಮೇಲ್ವಿಚಾರಣಾ ಅಧಿಕಾರಗಳನ್ನು ಹೊಂದಿದ್ದಾರೆ ಎಂದು ನ್ಯಾಯಾಲಯವು ಹೇಳಿತು.ಯಾವುದೇ ಅಪರಾಧದ ಮಾಹಿತಿ ಬಹಿರಂಗಗೊಂಡಾಗ ಎಫ್‌ಐಆರ್ ದಾಖಲಿಸುವುದು ಪೋಲಿಸರ ಕರ್ತವ್ಯವಾಗಿದೆ ಎಂದು ಲಲಿತಾ ಕುಮಾರಿ ತೀರ್ಪನ್ನು ಉಲ್ಲೇಖಿಸಿ ಹೇಳಿದ ನ್ಯಾಯಾಲಯವು, ಪೋಲಿಸರು ಎಫ್‌ಐಆರ್ ದಾಖಲಿಸದಿದ್ದರೆ ಸಂತ್ರಸ್ತರು ಸಿಆರ್‌ಪಿಸಿ ಅಥವಾ ಬಿಎನ್‌ಎಸ್‌ಎಸ್ ಅಡಿ ಹಿರಿಯ ಪೋಲಿಸ್ ಅಧಿಕಾರಿಗಳು ಅಥವಾ ಮ್ಯಾಜಿಸ್ಟ್ರೇಟ್‌ಗಳನ್ನು ಸಂಪರ್ಕಿಸುವ ಅವಕಾಶವಿದೆ ಎಂದು ತಿಳಿಸಿತು.
ಹೆಚ್ಚುವರಿ ನಿರ್ದೇಶನಗಳನ್ನು ಹೊರಡಿಸಲು ನ್ಯಾಯಾಲಯವು ನಿರಾಕರಿಸಿತಾದರೂ ಸಮಸ್ಯೆಯ ಗಂಭೀರತೆಯನ್ನು ಅದು ಒಪ್ಪಿಕೊಂಡಿತು. ದ್ವೇಷ ಭಾಷಣಗಳು ಮತ್ತು ವದಂತಿಗಳನ್ನು ಹರಡುವುದು ಸಾಮಾಜಿಕ ಸೌಹಾರ್ದತೆ, ವ್ಯಕ್ತಿಯ ಘನತೆ ಮತ್ತು ಸಾಂವಿಧಾನಿಕ ವ್ಯವಸ್ಥೆಯ ಮೇಲೆ ನೇರ ಪರಿಣಾಮವನ್ನು ಬೀರುತ್ತವೆ ಎಂದು ಹೇಳಿತು.ನ್ಯಾಯಾಲಯವು ಹೆಚ್ಚುವರಿ ಕಾನೂನು ಅಥವಾ ನೀತಿ ಕ್ರಮಗಳ ಅಗತ್ಯವಿದೆಯೇ ಎನ್ನುವುದನ್ನು ಪರಿಗಣಿಸುವುದನ್ನು ಶಾಸಕಾಂಗಕ್ಕೇ ಬಿಟ್ಟಿತು. ಇವುಗಳಲ್ಲಿ 2017ರ ಕಾನೂನು ಆಯೋಗದ 267ನೇ ವರದಿಯಲ್ಲಿ ಸೂಚಿಸಲಾಗಿರುವ ಸಂಭಾವ್ಯ ತಿದ್ದುಪಡಿಗಳೂ ಸೇರಿವೆ.
2020ರಿಂದ ನಡೆದ ವಿವಿಧ ದ್ವೇಷಭಾಷಣ ಘಟನೆಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ. ಈ ಅರ್ಜಿಗಳಲ್ಲಿ ಪ್ರಸಾರ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದ್ದ ಕೋಮುವಾದಿ ವಿಷಯಗಳು, ‘ಕೊರೋನಾ ಜಿಹಾದ್’ ಮತ್ತು ಸುದರ್ಶನ ಟಿವಿಯ ‘ಯುಪಿಎಸ್‌ಸಿ ಜಿಹಾದ್’ ನಂತಹ ನಿರೂಪಣೆಗಳನ್ನು ಮತ್ತು ‘ಧರ್ಮ ಸಂಸದ್’ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿತ್ತು.ಪತ್ರಕರ್ತ ಕುರ್ಬಾನ್ ಅಲಿ ಮತ್ತು ನಿವೃತ್ತ ಮೇಜರ್ ಜನರಲ್ ಎಸ್.ಜಿ.ಒಂಬಟ್ಕೆರೆ ಅವರೂ ಅರ್ಜಿದಾರರಲ್ಲಿ ಸೇರಿದ್ದು, ದ್ವೇಷಭಾಷಣದ ವಿರುದ್ಧ ಹೆಚ್ಚಿನ ಸುರಕ್ಷತೆ ಮತ್ತು ಮತ್ತು ಶಾಸಕಾಂಗದ ಹಸ್ತಕ್ಷೇಪವನ್ನು ಕೋರಿದ್ದರು.








