Friday, May 3, 2024
spot_imgspot_img
spot_imgspot_img

ನನಗಿಷ್ಟವಾದದ್ದು..! ಮೂಡುವ ಭಾವ ಸಂಸ್ಕಾರಯುತವಾಗಿದ್ದರೆ ಎಲ್ಲವೂ ಭಾವನಾತ್ಮಕವಾಗುತ್ತದೆ – ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ಎಲ್ಲರಿಗೂ ಇಷ್ಟವಾಗಬೇಕೆಂದೇನಿಲ್ಲ. ನನ್ನಿಷ್ಟ ಇತರರಿಗೆ ಪಕ್ವ ಹಲವರಿಗೆ ಪಕ್ಕಾ ವಿಷ. ಸಂಸ್ಕಾರ ಸಸಾರವಾಗ ತೊಡಗಿದಾಗ ನನ್ನದು ಬಿಡಿ, ಯಾರ ಮಾತು ಅಮೃತವಾಗುವುದಿಲ್ಲ. ಒಂಬತ್ತು ತಿಂಗಳು ಹೊತ್ತ ಹೆತ್ತಬ್ಬೆಯದ್ದೇ ಮಾತು ಗೌಣವಾಗುತ್ತದೆ, ಹೆಗಲೇರಿಸಿದ ಅಪ್ಪನ ಬುದ್ದಿವಾದ ಕೇವಲವಾಗಿ ಕಾಣತೊಡಗುತ್ತದೆ. ವರ್ತಮಾನದ ಸದ್ವಿದ್ಯೆ ಶ್ರೇಷ್ಠ ಬುದ್ದಿವಂತಿಕೆ ಕೊಟ್ಟಿತೇ ವಿನಃ ಸಂಸ್ಕಾರ ಕೊಡಲಿಲ್ಲವೆಂಬುದಕ್ಕೆ ಮಾಧ್ಯಮಗಳ ಇತ್ತೀಚೆಗಳ ಪ್ರಸ್ತುತಿಗಳೇ ಸಾಕ್ಷಿ . ” ಹೃದಯದೊಳಗಿನ ತಮವನು ಸರಿಸುತಿಹ ಸದ್ವಿದ್ಯೆ ಬದುಕಿಗಾಸರೆ ನೋಡು ಪುಟ್ಟ ಕಂದ” ಎಂಬಂತೆ ಮನಸ್ಸು ಮತ್ತು ಹೃದಯದೊಳಗಿನ ಕತ್ತಲಿಗೆ ಸದ್ವಿದ್ಯೆ ಸಿಕ್ಕಿದರೇನೇ ಬದುಕಿಗಾಸರೆಯಾದೀತು ಇಲ್ಲವಾದರೆ ಕೇವಲ ಬುದ್ದಿವಂತಿಕೆಯ ಶಿಕ್ಷಣ ಬದುಕನ್ನೇ ಕಸಿದೀತು.

ಪ್ರಸ್ತುತ ನಡೆಯುವ ಕೆಟ್ಟ ವಿದ್ಯಾಮಾನಗಳೆಲ್ಲವೂ ಸುಶಿಕ್ಷಿತರಿಂದಲೇ ಅಲ್ಲದೆ ಅನಕ್ಷರಸ್ಥರಿಂದಲ್ಲ. ಅನುಭವವುಳ್ಳ ಮುಗ್ದ ಹಿರಿಯರು, ಹಸುಳೆಯಂತೆ ಮುಗ್ದ ನಗು ಚೆಲ್ಲಲಷ್ಟೇ ಸಾಧ್ಯವಾಗಿ, ಅಸಹಾಯಕರಾಗಬೇಕಾದ ಸ್ಥಿತಿಯೊದಗಿಸಿದೆ ನಮ್ಮ ಕ್ರೂರ ತಂತ್ರಜ್ಞಾನ. ಸಾಕಿ ಸಲಹಿದ ಮನೆ ಬೇಡವಾಗಿ, ನಲಿದಾಡಿಸಿದ ಮಡಿಲು, ನಡೆದಾಡಿಸಿದ ಅಪ್ಪನ ಹೆಗಲು, ಕುಣಿದಾಡಿದ ಮನೆಯಂಗಳ ಬಡಕಲಾಗಿ ಎಲುಬಿನ ಹಂದರವಾಗಿದೆ. ಸುಸಂಸ್ಕಾರ ಕೊಟ್ಟ ಹಸಿರು ದಾರಿ, ಬಿಸಿಯೇರಿದ ಕಾಂಕ್ರೀಟಾಗಿ ಅದರ ಮೇಲೆ ಬದುಕಿನ ಸಾಗುಬಂಡಿ ಆಸತ್ವಯುತವಾಗಿ ಸಾಗುತಿದೆ. “ಬಂದುಗಳು ಎನಗಿಲ್ಲ ಬದುಕಿನಲಿ ಸುಖವಿಲ್ಲ” ವೆಂದು ಮತ್ತೆ ಸುಖವನರಸಬೇಕಾದ ವ್ಯಥೆ ಮನದೊಳಗಿದ್ದರೂ ಇಂದು ಅವೆಲ್ಲವೂ ಅದ್ಯಾರದೋ ಕಟ್ಟೋಣದಡಿ ಕಣ್ಣೀರಿಡುತ್ತಾ ಬಿದ್ದಿವೆ ಆಧುನಿಕ ಸೊಂಕಿನಡಿಗೆ ಬಿದ್ದ ಸಂಸ್ಕಾರದಂತೆ.

“ಭಾವನೆಯೊಂದೇ ಮನಸ್ಸನ್ನಾವರಿಸಿದಾಗ ಅದು ಒಂದು ಭೌತಿಕ ಅಥವಾ ಮಾನಸಿಕ ಸ್ಥಿತಿಗೆ ಪರಿವರ್ತನೆಗೊಳ್ಳುತ್ತದೆ “. ಆದ್ದರಿಂದ ಮೂಡುವ ವ್ಯಕ್ತಿಯ ಭಾವ ಅವನ ವ್ಯಕ್ತಿತ್ವದ ನಿರ್ಮಾತೃವಾಗುತ್ತದೆ. ಆದ್ದರಿಂದ ಮೂಡುವ ಭಾವ ಸಂಸ್ಕಾರಯುತವಾಗಿದ್ದರೆ ಎಲ್ಲವೂ ಭಾವನಾತ್ಮಕವಾಗುತ್ತದೆ.


ಪ್ರತಿ ಮಾನವ ಶರೀರದ ದೇವಾಲಯದಲ್ಲಿ ಕುಳಿತಿರುವ ದೇವರನ್ನು ಅರ್ಥಮಾಡಿಕೊಂಡ ಕ್ಷಣ, ಪ್ರತಿ ಮಾನವ ಜೀವಿಯ ಮುಂದೆ ನಾವು ಪೂಜ್ಯ ಭಾವದಿಂದ ನಿಂತು ಅವನಲ್ಲಿ ದೇವರನ್ನು ನೋಡಿದಾಗ ಆ ಕ್ಷಣ ನಾವು ಬಂಧನದಿಂದ ಬಂಧಿಸಿ ನಾಶವಾಗುವ ಪ್ರತಿಯೊಂದರಿಂದ ಮುಕ್ತ ಮತ್ತು ಸ್ವತಂತ್ರವಾಗುತ್ತೇವೆ. ತಮ್ಮತನದ ಜೀವನವನ್ನು ಪರರ ಸಂತೋಷಕ್ಕಾಗಿ ಒತ್ತೆಯಿಟ್ಟು ಏನೇನೋ ಕೊಳಚೆಯಾಗಿಸುತ್ತಿರುವುದು ನಿಮ್ಮ ಸಂಸ್ಕಾರ ಯುತ ಬದುಕಿಗೆ ನೀವೇ ಕೊಳ್ಳಿಯಿಟ್ಟಂತೆ ಅಲ್ವೇ.

ಹಿರಿಯರ ಅಂಬೋಣವಿದೆ “ಕೆಸರಲ್ಲಿ ಯಾವುದೇ ಕಂಬ ನೆಡಬಾರದು ” ಎಂದು. ಕಾರಣ ಇಷ್ಟೇ ಅದು ಯಾವ ಕಡೆ ಬಲ ಹೆಚ್ಚು ಬೀಳುವುದೋ ಆ ಕಡೆಗೆ ವಾಲುತ್ತದೆ. ಅರ್ಥಾತ್ ದುರ್ಬಲ ಮನಸ್ಸಿನ ಹಾಗೇ. ಎಲ್ಲಾ ಜನರಾಡುತಿದ್ದಾರೆ, ಭಾರತದ ಪರಂಪರೆ ಎತ್ತಲೋ ಸಾಗುತಿದೆಯೆಂದು…… ಇಲ್ಲ ಬಂಧುಗಳೇ ಹೀಗೆ ಆದರೆ ನಾವೇ ಇನ್ನೆತ್ತಲೋ ಸಾಗಬೇಕಾದೀತು, ಯಾಕೆಂದರೆ ಮುಂದಿನ ನಮ್ಮ ಭಾರತದಲ್ಲಿ ಸಂಸ್ಕಾರ-ಸಂಸ್ಕೃತಿ, ಸತ್ಯ-ಧರ್ಮ, ವಿಶ್ವಾಸ-ನಂಬಿಕೆ ಗಳನ್ನೆಲ್ಲ ಕಸಿದು ಹೇಗಾದರೂ ಬದುಕು ಕಟ್ಟುವ ಹಿಂಸಾತ್ಮಕ ಪ್ರಕ್ರಿಯೆಗಳಿಗೆ ತಾಣವಾಗಬಹುದು. ರಾಜಕೀಯ ಆರಾಜಕತೆಯೊಳಗೆ ಬಡಪಾಯಿಗಳ ಸ್ವರವಿಲ್ಲದೆ ಗಂಟಲು ಶುಷ್ಕವಾಗಿ ಜೀವ ಕೊಡಬೇಕಾಗಬಹುದು. ಇದೆಲ್ಲದರ ಅರಿವು ಮೂಡಿಸಿದ ಬಲ್ಲಿದರ ಮಾತುಗಳು ನನಗಿಷ್ಟವಾಯಿತು.

?️ ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!