Friday, April 26, 2024
spot_imgspot_img
spot_imgspot_img

ರಕ್ಷಾಬಂಧನ- ಸಂಬಂಧಗಳ ಬೆಸುಗೆ

- Advertisement -G L Acharya panikkar
- Advertisement -

✍️ರಾಧಾಕೃಷ್ಣ ಎರುಂಬು ‘ರಾಮದೇವ್ ‘ ವಿಟ್ಲ

“ಪ್ರಪಂಚದಲ್ಲಿ ನಾವು ನಂಬಿರುವ ದೇವರುಗಳು ಕಲ್ಲಾಗಿರಬಹುದು ಆದರೆ ಅವುಗಳನ್ನು ಪೂಜಿಸುವ ನಮ್ಮ ಮನಸುಗಳು ಕಲ್ಲಲ್ಲ, ಬದುಕು ನಂಬಿಕೆಯ ಕೈ ಗನ್ನಡಿ “.

ಪ್ರಸ್ತುತ ಜಗತ್ತೇ ಯಾಂತ್ರಿಕೃತವಾಗಿರುವುದರಿಂದ ಸಂಬಂಧಗಳು ಬದಿಗೆ ಸರಿದು ಪ್ರೀತಿ ಕೊಡಲು, ಸ್ನೇಹ ಬೆಳೆಸಲು, ಸಂಬಂಧ ಉಳಿಸಿಕೊಳ್ಳಲು ಸಮಯವೆಲ್ಲಿದೆ ಹೇಳಿ. “ಕೋಪ ಮಾತಿನಲ್ಲಿರಬೇಕು, ಮನಸಿನಲ್ಲಲ್ಲ, ಆದರೆ ಪ್ರೀತಿ ಮನಸಿನಲ್ಲಿರಬೇಕು ಮಾತಿನಲ್ಲಲ್ಲ”. ಕೆಲವೊಮ್ಮೆ ಅನಿಸುತ್ತದೆ ಬೆಲೆ ತೆರಲಾಗದ, ಮುಟ್ಟಿ-ಮುಷ್ಟಿಯೊಳಗೆ ಇರಿಸಲಾಗದ ಬೆಲೆ ಕಟ್ಟಲಾಗದ ಸೊತ್ತು ಹೃದಯದೊಳಗಿರುತ್ತದೆ. ಅದೇ ಪ್ರೀತಿ, ಬೇಡ ಇನ್ನೂ ಅಮೂಲ್ಯ ಪದ ಭಾಂಧವ್ಯ.

ಒಪ್ಪಂದ ಮಾಡಿ ಭದ್ರವಾಗಿರಿಸುವ ಸಾಂಕೇತಿಕ ಹಬ್ಬ ರಕ್ಷಾ ಬಂಧನ. ಇದು ಅಣ್ಣ-ತಂಗಿಯರ ಎಲ್ಲೊ ಹುಟ್ಟಿದ ಭ್ರಾತೃತ್ವವನ್ನು ಪ್ರತ್ಯಕ್ಷಿಕರಿಸಿ ತೋರಿಸಿಕೊಡುವ ಅತ್ಯಂತ ಮೌಲ್ಯಭರಿತ ಹಬ್ಬವೇ ಸರಿ.

ಹಿನ್ನೆಲೆ:-
ಇದು ನಿನ್ನೆ ಮೊನ್ನೆಯದಲ್ಲ, ಇತಿಹಾಸ ಹೇಳುವ ಅನುರಣನ ಸಂಬಂಧ.ವಿರೋಧಿಗಳು ತನ್ನ ವಿರೋಧಾಭಾಸವನ್ನು ಮರೆತದ್ದೂ ಇದೆ, ದೇಶ ಭದ್ರವಾಗಿಸಲು ಸಹೋದರತೆ ಉಳಿಸಿಕೊಳ್ಳಲು ಒಂದಾಗುವ ಸಂಕೇತವಾಗಿಯೂ ಇರುವ ಸಂಬಂಧಗಳ ಬಂಧನವಾಗಿ ನಮಗೆ ಕಾಣುವ ಈ ಕಥೆಗಳು ಸಾರುವ ಸಾರಾಂಶ ಆಶ್ಚರ್ಯ ತರುತ್ತದೆ. ಅಲೆಕ್ಸಾಂಡರ್ ಮತ್ತು ಪೋರಸ್ ಯುದ್ಧ ನಡೆದಾಗ ಅಲೆಕ್ಸಾಂಡರ್ ಪತ್ನಿ ರೋಕ್ಸನಾ ಪೋರಸಸ್ ಗೆ ಸಹೋದರತೆಯ ಸಂಕೇತ ಪವಿತ್ರ ರಾಖಿಯನ್ನು ಕಟ್ಟಿ ತನ್ನ ಗಂಡನಿಗೆ ಪ್ರಾಣ ಬಿಕ್ಷೆಯನ್ನು ಪಡೆದದ್ದು. ಚಿತ್ತೂರಿನ ರಾಣಿ ಕರ್ಣಾವತಿ ಜೀವನದಲ್ಲಿ ಹುಮಾಯೂನ್ಗೆ ರಾಖಿ ಕಟ್ಟಿ ಬಹದ್ದೂರ್ ಶಾ ನಿಂದ ರಕ್ಷಿತಳಾದದ್ದು. ಪುರಾಣಕ್ಕೆ ಹೋದರೆ ಶಿಶುಪಾಲನನ್ನು ಕೊಲ್ಲುವುದಕ್ಕೆ ಸುದರ್ಶನ ಚಕ್ರ ಎತ್ತಿದ ಕೃಷ್ಣನ ಬೆರಳ ರಕ್ತ ಕಂಡು ದ್ರೌಪದಿ ಕಟ್ಟಿದ ತನ್ನ ಸೀರೆಯ ತುಣುಕು ದ್ರೌಪದಿ ವಸ್ತ್ರಾಪಹಾರ ಸಂದರ್ಭದಲ್ಲಿ ರಕ್ಷಿಸಲ್ಪಟ್ಟ ಕಥೆಗೆ ಶ್ರೀಕೃಷ್ಣ ಮತ್ತು ದ್ರೌಪದಿ ಸಹೋದರ-ಸಹೋದರಿ ಭಾವ ಹೆಚ್ಚಿಸಿದ ಕಥೆ ನಮಗೆಲ್ಲರಿಗೂ ತಿಳಿದದ್ದೇ.

ಇಂದ್ರನ ಅಮರಾವತಿಗೆ ರಾಕ್ಷಸನ ದಾಳಿಯಾದಾಗ ರಕ್ಷಿಸಲು ವಿಷ್ಣು ಶಚಿಗೆ ನೀಡಿದ ಹತ್ತಿಯ ದಾರ ರಾಕ್ಷಸನ ವಧೆಗೆ ಸಹಾಯಕವಾದದ್ದು ದಂತಕಥೆ.ಭಾರತದ ಇತಿಹಾಸದ 1905ರಲ್ಲಿ ಹಿಂದೂ-ಮುಸ್ಲಿಂ ನಡುವಿನ ಬಾಂಧವ್ಯ ಮತ್ತು ಒಗ್ಗಟ್ಟನ್ನು ಬ್ರಿಟಿಷರೆದುರು ತೋರಿಸಲು ರವೀಂದ್ರನಾಥ ಟಾಗೋರ್ ಸಹೋದರತೆಯ ರಕ್ಷಾಬಂಧನ ಸಮಾರಂಭ ಏರ್ಪಡಿಸಿದ್ದರು. ಜಾರ್ಖಂಡಿನ ಬುಡಕಟ್ಟು ಮಹಿಳೆಯರು ಮರಕೆ ರಾಖಿ ಕಟ್ಟಿ ತಮ್ಮನ್ನು ರಕ್ಷಿಸುವಂತೆ ಬೇಡುತ್ತಾರೆ ಇದೆಯಲ್ಲವೇ “ವೃಕ್ಷೋ ರಕ್ಷತಿ ರಕ್ಷಿತಃ”.

ಹೀಗಿರಬೇಕು :-
ಹೀಗೆ ಇವೆಲ್ಲವೂ ಸಾಕ್ಷಿಭೂತ ಕಥೆಗಳಾದರೆ ವಾಸ್ತವದಲ್ಲಿ ಅಣ್ಣ-ತಂಗಿ ಬಂಧವನ್ನು ಮತ್ತಷ್ಟು ಬಿಗಿಗೊಳಿಸುವ ಸಂತಸದ ಹಬ್ಬ. ಹಾಗಿದ್ದರೆ ಇದು ಒಡಹುಟ್ಟಿದವರೊಳಗೆ ಮಾತ್ರವಲ್ಲ ಅಪರಿಚಿತ ರೊಳಗೆ ಸಹೋದರತೆಯ ಭ್ರಾತೃತ್ವದ ಬೆಸುಗೆ. ಅಲ್ಲಿ ಕಲ್ಮಶಗಳು ಬಂದು ಅಪವಿತ್ರತೆ ಕಾಣದೆ ಜೀವನದುದ್ದಕ್ಕೂ ಧೈರ್ಯದ ಸುಖ-ದುಃಖದ ಸಮಪಾಲು ಹಂಚುವ ಸಾಂಪ್ರದಾಯಿಕ ಹಬ್ಬ. ಅಲ್ಲದೆ ಕೆಲವೊಂದು ಸಂಘ ಸಂಸ್ಥೆಗಳ ವಾರ್ಷಿಕ ಹಬ್ಬದ ಸಾಲಿಗೂ ಸೇರಿರುವುದು ಸಂತಸವಾದರೆ ಜಾತಿ,ಮತ,ಬೇಧ ಮರೆತು ಆಚರಿಸುವ ಹಬ್ಬ ಇತ್ತೀಚೆಗೆ ಹಿಂದುಗಳ ಹಬ್ಬ ಎಂಬ ನಿಲುಮೆಯಿಂದ ಪವಿತ್ರತೆಗೆ ಕುಂದು ತಂದಿರುವುದು ಇನ್ನಷ್ಟು ಖೇದಕರ ಸಂಗತಿ.

ಆಚರಿಸುವ ಬಗೆ:-
ಸಹೋದರ-ಸಹೋದರಿಯರು ರಕ್ಷಾಬಂಧನದ ದಿನ ಮುಂಜಾನೆ ಸ್ನಾನ ಮಾಡಿ ಭೌತಿಕ ಶುದ್ಧೀಕರಿಸಿ ಆಂತರ್ಯದ ಭಾವನೆಗಳ ಶುದ್ಧತೆಗೆ ಅಣಿಯಾಗುವುದು.ಸಹೋದರನಿಗೆ ರಾಖಿ ಕಟ್ಟುವ ವರೆಗೂ ನಿರಾಹಾರಿಯಾಗಿರುವುದು ಕ್ರಮ.ರಾಕಿ ಅಥವಾ ತಾಲಿ ಎಂದು ಕರೆಯಲ್ಪಡುವ ಪವಿತ್ರ ದಾರ ಯಾ ರಕ್ಷಣೆಯ ಗಂಟನ್ನು ದೀಪ,ಕುಂಕುಮ ಮತ್ತು ಅಕ್ಷತೆಯಿಂದ ಅಲಂಕರಿಸಬೇಕು. ಸಹೋದರಿ ಸಹೋದರನಿಗೆ ರಾಖಿಯನ್ನು ಕಟ್ಟಿ ಸಹೋದರನಿಂದ ಉಡುಗೊರೆಯನ್ನು ಹಣೆಗೆ ಕುಂಕುಮವನ್ನು ಇರಿಸಿಕೊಂಡು ತನ್ನ ‘ರಕ್ಷಣೆಯ ಭಾರ’ ನನ್ನದು ಎನ್ನುವ ಶಾಸ್ತ್ರೋಕ್ತ ಕ್ರಮವನ್ನು ಅನುಸರಿಸುತ್ತಾರೆ.

ಯಾವಾಗ ಆಚರಿಸುತ್ತಾರೆ:-
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಹಬ್ಬದ ಆಚರಣೆ. ಈ ವರ್ಷ ಆಗಸ್ಟ್ 22 ನೇ ತಾರೀಖಿನಂದು ಆಚರಿಸಲಾಗುತ್ತಿದೆ.

ಶುದ್ಧ ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತಾಗಿರುವ ರಕ್ಷೆ (ರಕ್ಷಣೆ) ಹಾಗೂ ಬಂಧನ (ಸಂಬಂಧ) ಎಂಬ ಎರಡು ಪದಗಳಿಂದ ಕೂಡಿದ ‘ರಕ್ಷಾಬಂಧನ’ ಎಂಬ ರೇಷ್ಮೆ ದಾರದ, ಅಲಂಕೃತ ಮಣಿಗಳ ಬಣ್ಣಬಣ್ಣದ ಶುಭಾಶಯ ಪತ್ರಗಳ ಆಯ್ಕೆಯ ಸಾಹಸ ಅದ್ಭುತ. ಮಾರುಕಟ್ಟೆಯಲ್ಲಿ ಈ ಸಮಯ ಬಿರುಸಾಗಿ ನಡೆಯುತ್ತಿದೆ ಈ ವರ್ಷ ಎಲ್ಲವೂ ನಿರ್ಲಿಪ್ತವಾಗಿದ್ದರೂ, ಸಂಪ್ರದಾಯದಂತೆ ಹಬ್ಬದಾಚರಣೆ ಮೌನವಾಗಿ ನಡೆದು ಸಹೋದರತೆಯ ಅಂತರಾಳದ ಬೆಸುಗೆ ಇನ್ನಷ್ಟು ಹತ್ತಿರವಾಗಲಿ. ನಾಲ್ಕು ದಿನಗಳ ಜೀವ-ಜೀವನ ಪ್ರತಿಯೋರ್ವನಿಗೂ ಅಮೂಲ್ಯ. ಇದನ್ನು ಭದ್ರ ಪವಿತ್ರ ಮತ್ತುಸಹೋದರತೆಯಿಂದ ಕಳೆಯೋಣ.ರಕ್ಷಾಬಂಧನದ ಶುಭಾಶಯಗಳು.

- Advertisement -

Related news

error: Content is protected !!