


ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಮತ್ತೊಬ್ಬ ಶಂಕಿತನನ್ನು ಬಂಧಿಸಿದೆ. ಶಂಕಿತ ಆರೋಪಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದನೆ ಸಂಚು ಪ್ರಕರಣದ ಮಾಜಿ ಅಪರಾಧಿ.
ಕರ್ನಾಟಕದ ಹುಬ್ಬಳ್ಳಿ ಮೂಲದ 35 ವರ್ಷದ ಛೋಟು ಎಂದು ಕರೆಯಲ್ಪಡುವ ಶೋಯೆಬ್ ಅಹ್ಮದ್ ಮಿರ್ಜಾ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಬಂಧಿತ ಐದನೇ ವ್ಯಕ್ತಿ
ಈ ಹಿಂದೆ ಎಲ್‌ಇಟಿ ಬೆಂಗಳೂರು ಪಿತೂರಿ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಮಿರ್ಜಾ ಜೈಲಿನಿಂದ ಹೊರಬಂದ ನಂತರ ಹೊಸ ಸಂಚಿನಲ್ಲಿ ಭಾಗಿಯಾಗಿದ್ದಾನೆ ಎಂದು ಎನ್‌ಐಎ ತನಿಖೆಗಳು ಬಹಿರಂಗಪಡಿಸಿವೆ.
“ಎನ್ಐಎ ಅಧಿಕಾರಿಗಳು ಮೂರು ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ” ಎನ್‌ಐಎ ಶುಕ್ರವಾರ ತಿಳಿಸಿದೆ.
ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಶೋಹೆಬ್ ಮತ್ತು ಆತನ ಸಹೋದರನನ್ನ ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ್ದ NIA ಅಧಿಕಾರಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಹೆಬ್ ಮಿರ್ಜಾನನ್ನು ಬಂಧಿಸಿದ್ದಾರೆ.








