ವಿಟ್ಲ:ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಗುಣ ಮಟ್ಟದ ವಿದ್ಯೆಯನ್ನು ನೀಡಿ ಶಿಕ್ಷಿತರನ್ನಾಗಿ ಮಾಡುವುದರ ಮೂಲಕ ಸಮಾಜದ ಅಭಿವೃದ್ದಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯವಿದೆ.
ಪ್ರತೀ ಮೊಹಲ್ಲಾ ವ್ಯಾಪ್ತಿಯಲ್ಲಿ ಕಲಿಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಂಕಿ ಅಂಶ ಲೆಕ್ಕಗಳು ಮಸೀದಿ ಸಮಿತಿಯವರು ಶೇಖರಿಸಿಟ್ಟು ಅಂತವರನ್ನು ಪುರಸ್ಕರಿಸಲು ಮುಂದೆ ಬರಬೇಕಲ್ಲದೇ ಅವರ ಮುಂದಿನ ವಿದ್ಯಾಬ್ಯಾಸಕ್ಕೆ ಆರ್ಥಿಕ ತೊಡಕು ಉಂಟಾದರೆ ಅದನ್ನು ನಿವಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸ ಬೇಕಾಗಿದೆ.ಅದು ಮಾತ್ರವಲ್ಲದೇ ಸಮಾಜದಲ್ಲಿ ಹುಡುಗಿಯರು ವಿಶೇಷ ಶ್ರೇಣಿಗಳಲ್ಲಿ ಅಂಕ ಪಡೆಯುತ್ತಿದ್ದರೂ ಹುಡುಗರು ಇನ್ನೂ ಕೂಡಾ ಕಲಿಕೆಯಲ್ಲಿ ಹಿಂದುಳಿದದ್ದನ್ನು ಮನಗಂಡು ಈ ಬಗ್ಗೆ ಜಾಗೃತಿ ಮೂಡಿಸ ಬೇಕಾದ ಕೆಲಸ ಸಂಘ ಸಂಸ್ಥೆಗಳಿಂದ ಆಗ ಬೇಕಿದೆ ಎಂದು ಉಲಮಾ ಒಕ್ಕೂಟ ಅಭಿಪ್ರಾಯ ಪಟ್ಟಿದೆ.
ಪುರಸ್ಕರಿಸುವ ಸರಳ ಸಮಾರಂಭದಲ್ಲಿ ಸಂಘಟನೆಯ ಮುಖಂಡರಾದ ಕೆ ಎಲ್ ದಾರಿಮಿ ಪಟ್ಟೋರಿ ಮತ್ತು ಕೆಬಿ ಅಬ್ದುಲ್ ಖಾದಿರ್ ದಾರಿಮಿ ಇವರ ಪುತ್ರಿಯರಾದ ಮರ್ಯಂ ಶಂಲ ಹಾಗೂ ಆಯಿಶತ್ ಮಿಸ್ರಿಯ ಎಂಬೀ ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದು ಸಮಾಜಕ್ಕೆ ಕೀರ್ತಿ ತಂದದ್ದನ್ನು ಅಭಿನಂದಿಸಲು ರಾಜ್ಯ ಉಲಮಾ ಒಕ್ಕೂಟದ ನಾಯಕರು ಅವರ ನಿವಾಸಕ್ಕೆ ತೆರಳಿ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಇದೇ ಸಂಧರ್ಭದಲ್ಲಿ ಸಂಘಟನೆಯ ಪ್ರಮುಖರಾದ ಮುಲ್ಕೀ ಖತೀಬ್ ಎಸ್ ಬಿ ಮುಹಮ್ಮದ್ ದಾರಿಮಿ ಉಪ್ಪಿನಂಗಡಿ, ಮೌಲಾನ ಯು ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಕಿನ್ಯ ,ಖಾಸಿಂ ದಾರಿಮಿ ತೋಡಾರು, ಕುಕ್ಕಿಲ ಅಬ್ದುಲ್ ಖಾದಿರ್ ದಾರಿಮಿ ವಳಚ್ಚಿಲ್ ಮೊದಲಾದವರು ಹಾಜರಿದ್ದರು.