Thursday, April 25, 2024
spot_imgspot_img
spot_imgspot_img

ಅತ್ಯಾಚಾರ ಸಂತ್ರಸ್ತ ಬಾಲಕಿಗೆ ನೆರವು ನೀಡಲು ಆದೇಶ !

- Advertisement -G L Acharya panikkar
- Advertisement -

ಚಾಮರಾಜನಗರ: ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿ ವಿಚಾರಣಾ ಕೈದಿಯಾಗಿದ್ದ ಸಂದರ್ಭದಲ್ಲಿ ಮೃತಪಟ್ಟರೂ ಬಾಲಕಿಯ ಭವಿಷ್ಯದ ದೃಷ್ಟಿಯಿಂದ ಆಕೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ₹5 ಲಕ್ಷ ಪರಿಹಾರ ಮತ್ತು ಸರ್ಕಾರದಿಂದ ಶಿಕ್ಷಣಕ್ಕೆ ಅವಶ್ಯವಿರುವ ಸೌಲಭ್ಯ ಕಲ್ಪಿಸಬೇಕು ಎಂದು ನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆದೇಶ ನೀಡಿದೆ.

ಯಳಂದೂರು ಠಾಣೆ ವ್ಯಾಪ್ತಿಯ ಗ್ರಾಮವೊಂದರ ನಿವಾಸಿಯಾದ 65 ವರ್ಷದ ವ್ಯಕ್ತಿ 2019ರ ಸೆಪ್ಟೆಂಬರ್ 19ರಂದು 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ.

ವಿಚಾರಣೆ ಮುಗಿಯುವ ಮುನ್ನವೇ ಆರೋಪಿಯು ನ್ಯಾಯಾಂಗ ಬಂಧನಲ್ಲಿದ್ದು ಮೃತಪಟ್ಟಿದ್ದ. ಕೃತ್ಯ ಎಸಗಿರುವ ಬಗ್ಗೆ ನೊಂದ ಬಾಲಕಿ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದಳು.

ಬಾಲಕಿಗೆ ಅನ್ಯಾಯವಾಗಬಾರದೆಂಬ ಸಾಮಾಜಿಕ ಕಳಕಳಿಯಿಂದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ ಅವರು, ‘ಕಾನೂನು ಸೇವಾ ಪ್ರಾಧಿಕಾರದಿಂದ ₹5 ಲಕ್ಷ ಪರಿಹಾರವನ್ನು ನೀಡಿ ಬ್ಯಾಂಕಿನಲ್ಲಿ ನಿಗದಿತ ಠೇವಣಿಯಾಗಿ ಈ ಹಣವನ್ನು ಬಾಲಕಿಯ ಹೆಸರಿನಲ್ಲಿ ಇಡಬೇಕು. ಇದರ ಬಡ್ಡಿಯನ್ನು ಬಾಲಕಿ ಪ್ರಾಪ್ತಳಾಗುವವರೆಗೂ ವಿನಿಯೋಗಿಸಬಹುದು. ಬಾಲಕಿಯ ಶಿಕ್ಷಣ ಹಾಗೂ ಉನ್ನತ ಶಿಕ್ಷಣದ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕು’ ಎಂದು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ. ಯೋಗೇಶ್ ವಾದ ಮಂಡಿಸಿದ್ದರು.

- Advertisement -

Related news

error: Content is protected !!