Sunday, June 29, 2025
spot_imgspot_img
spot_imgspot_img

ಬಡ್ಡಿದರ ಶೇ.6.5ರಲ್ಲೇ ಮುಂದುವರಿಸಲು ಆರ್‌ಬಿಐ ನಿರ್ಧಾರ

- Advertisement -
- Advertisement -

ನವದೆಹಲಿ: ಆರ್​ಬಿಐ ಬಡ್ಡಿದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಿದೆ. ಸತತ 10ನೇ ಬಾರಿ ಆರ್​ಬಿಐ ನಿಲುವು ಅಚಲವಾಗಿದೆ. ಇದರೊಂದಿಗೆ ರೆಪೋ ದರ ಅಥವಾ ಬಡ್ಡಿದರ ಶೇ. 6.50ರಲ್ಲಿ ಮುಂದುವರಿಯಲಿದೆ. ಸೋಮವಾರದಿಂದ ಮೂರು ದಿನಗಳ ಕಾಲ ನಡೆದ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ಸಭೆಯ ನಿರ್ಧಾರಗಳನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆರ್​ಬಿಐನ ಆರು ಎಂಪಿಸಿ ಸದಸ್ಯರಲ್ಲಿ ಐವರು ಸದಸ್ಯರು ರೆಪೋ ದರ ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದರು ಎಂದು ಶಕ್ತಿಕಾಂತದಾಸ್ ಹೇಳಿದ್ದಾರೆ. ಎಂಎಸ್​ಎಲ್​ಆರ್ ಇತ್ಯಾದಿ ಇತರ ದರಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ.

ರಿಪೋ ದರ ಎಂದರೆ ಬ್ಯಾಂಕುಗಳು ಆರ್​ಬಿಐನಿಂದ ಪಡೆಯುವ ಸಾಲಕ್ಕೆ ವಿಧಿಸಲಾಗುವ ಬಡ್ಡಿದರವಾಗಿದೆ. ರಿವರ್ಸ್ ರಿಪೋ ಎಂದರೆ ಆರ್​ಬಿಐನಲ್ಲಿ ಬ್ಯಾಂಕುಗಳು ಇಡುವ ಠೇವಣಿಗೆ ಸಿಗುವ ಬಡ್ಡಿಯಾಗಿದೆ. ಆರ್​ಬಿಐನ ಈ ದರಗಳು ಬ್ಯಾಂಕುಗಳ ಬಡ್ಡಿದರ ನೀತಿಗೆ ಪ್ರಭಾವ ಬೀರುತ್ತವೆ. ರಿಪೋ ದರಗಳು ಹೆಚ್ಚಾದರೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಬಡ್ಡಿದರ ಹೆಚ್ಚಿಸಬಹುದು. ಹೀಗಾಗಿ, ಆರ್​ಬಿಐನ ರಿಪೋದರ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಪರಿಣಾಮ ಬೀರುತ್ತದೆ.

ಆಹಾರ ಮತ್ತು ಲೋಹಗಳ ಬೆಲೆಗಳಲ್ಲಿ ಇತ್ತೀಚೆಗೆ ಆಗಿರುವ ಹೆಚ್ಚಳವು ಹಣದುಬ್ಬರ ಹೆಚ್ಚಳಕ್ಕೆ ಎಡೆ ಮಾಡಿಕೊಡಬಹುದು ಎನ್ನುವ ಆತಂಕವನ್ನು ಶಕ್ತಿಕಾಂತ ದಾಸ್ ವ್ಯಕ್ತಪಡಿಸಿದ್ದಾರೆ. ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ಇರುವ ಹಿನ್ನೆಲೆ ಬಡ್ಡಿದರವನ್ನು ಅಧಿಕ ಮಟ್ಟದಲ್ಲೇ ಮುಂದುವರಿಸಲು ಆರ್‌ಬಿಐನ ಎಂಪಿಸಿ ತೀರ್ಮಾನಿಸಿದೆ. ಹಣದುಬ್ಬರ ಈ ಹಣಕಾಸು ವರ್ಷದಲ್ಲಿ ಶೇ. 4.5ರಷ್ಟು ಇರಬಹುದು ಎಂದು ಆರ್‌ಬಿಐ ಅಂದಾಜಿಸಿದೆ.

ಆರ್​​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರ್ಥಿಕತೆ ಬಗ್ಗೆ ಆಶಾದಾಯಕವಾಗಿದ್ದಾರೆ. 2024-25ರ ಹಣಕಾಸು ವರ್ಷದಲ್ಲಿ ಆರ್ಥಿಕತೆ ಶೇ. 7.2ರಷ್ಟು ಬೆಳೆಯಬಹುದು ಎಂದಿದ್ದಾರೆ. ಈ ಹಣಕಾಸು ವರ್ಷದ ಎರಡು, ಮೂರು ಮತ್ತು ನಾಲ್ಕನೇ ಕ್ವಾರ್ಟರ್​ನಲ್ಲಿ ಜಿಡಿಪಿ ಕ್ರಮವಾಗಿ ಶೇ. 7.0, ಶೇ. 7.4, ಮತ್ತು ಶೇ. 7.4ರ ದರದಲ್ಲಿ ಬೆಳೆಯಬಹುದು ಎಂದಿದ್ದಾರೆ. ಮುಂದಿನ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲಿ ಜಿಡಿಪಿ ಶೇ. 7.3ರಷ್ಟು ಹೆಚ್ಚಬಹುದು ಎಂದೂ ಅಂದಾಜಿಸಿದ್ದಾರೆ.

- Advertisement -

Related news

error: Content is protected !!