ವಿಟ್ಲ: ಪೆರುವಾಯಿ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳ ವೇಳೆ ಅನುಮತಿ ನೀಡಿದ ಕಟ್ಟಡದ ಕಾಮಗಾರಿ ರಸ್ತೆಯ ಪರಿದಿಯೊಳಗಿದೆ ಎಂಬ ಕಾರಣಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದ ತಂಡ ಸ್ಥಗಿತಗೊಳಿಸಿದ ಘಟನೆ ಪೆರುವಾಯಿಯಲ್ಲಿ ಗುರುವಾರ ನಡೆದಿದೆ.
ಪಂಚಾಯಿತಿ ಆಡಳಿತ ಇರುವ ಸಮಯದಲ್ಲಿ ಕಟ್ಟಡ ಕಟ್ಟಲು ಪರವಾನಗಿ ನೀಡಿದ್ದು, ಸದ್ಯ ಕಾಮಗಾರಿ ರಸ್ತೆ ವ್ಯಾಪ್ತಿಯಲ್ಲಿ ಬರುತ್ತದೆ ಎಂಬ ಆರೋಪದ ಮೇಲೆ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗೆ ದೂರು ನೀಡಲಾಗಿತ್ತೆನ್ನಲಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ನೇತೃತ್ವದಲ್ಲಿ ಕಾಮಗಾರಿಯನ್ನು ಸ್ಥಗಿತ ಮಾಡಲಾಯಿತು.
ರಸ್ತೆ ವ್ಯಾಪ್ತಿಯನ್ನು ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕೆಂದು ಪರವಾನಿಗೆಯಲ್ಲಿ ಸೂಚಿಸಿದ್ದರೂ, ಅದನ್ನು ನಿರ್ಲಕ್ಷಿಸಿ ಕಾನೂನು ಬಾಹಿರವಾಗಿ ಕಾಮಗಾರಿ ನಡೆಯುತ್ತಿದೆ ಎಂಬ ಆರೋಪವನ್ನು ಮಾಡಲಾಗಿತ್ತು. ಕಾಮಗಾರಿ ಸ್ಥಗಿತಕ್ಕೆ ಹೋದ ಸಮಯದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಹಿನ್ನಲೆಯಲ್ಲಿ ವಿಟ್ಲ ಪೊಲೀಸ್ ರಕ್ಷಣೆಯನ್ನು ನೀಡಿ ಕಾಮಗಾರಿಯನ್ನು ಸ್ಥಗಿತ ಮಾಡಲು ಸೂಚಿಸಲಾಗಿದೆ.