
ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧುರನ್ನು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ವಿಶೇಷ ಕಲಾಕೃತಿಯ ಮೂಲಕ ಅಭಿನಂದಿಸಿದ್ದಾರೆ.

ಒಡಿಶಾದ ಕಡಲತೀರದಲ್ಲಿ ಮರಳಿನಲ್ಲಿ ಸಿಂಧು ಹಾಗೂ ಅವರ ಕಂಚಿನ ಪದಕವನ್ನು ಹೊಂದಿರುವ ಕಲಾಕೃತಿಯನ್ನು ಪಟ್ನಾಯಕ್ ಅವರು ರಚಿಸಿದ್ದಾರೆ. ಅಲ್ಲದೇ, ‘ನಿಮ್ಮ ಅದ್ಭುತ ಪ್ರದರ್ಶನದಿಂದ ಇಡೀ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ’ ಎಂದು ಸುದರ್ಶನ್ ಈ ಕಲಾಕೃತಿಯಲ್ಲಿ ಬರೆದಿದ್ದಾರೆ.
ನಿನ್ನೆ ನಡೆದ ಬಹು ನಿರೀಕ್ಷಿತ ಹಣಾಹಣಿಯಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದರು. ಆ ಮೂಲಕ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ 2ನೇ ಪದಕ ಗೆದ್ದು ತಂದಿದ್ದರು. ಚೀನಾದ ಹೀ ಬಿಂಗ್ ಜಿಯಾವೋ ವಿರುದ್ಧ 13/21, 15/21 ಅಂತರದ ನೇರ ಸೆಟ್ಗಳ ಜಯ ಸಾಧಿಸಿದ್ದರು. ಈ ಮೂಲಕ ಸತತ 2 ಒಲಿಂಪಿಕ್ಸ್ ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು. 2016ರ ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿದ್ರು.



