Saturday, April 20, 2024
spot_imgspot_img
spot_imgspot_img

ಯಕ್ಷಗಾನದ ಚಾಲೆಂಜಿಂಗ್ ಸ್ಟಾರ್ ಯಕ್ಷಧ್ರುವ ಪಟ್ಲ! ಕತ್ತಲೆ ಕವಿದ ಯಕ್ಷಗಾನ ಪ್ರಪಂಚಕ್ಕೆ ಇಂದದ್ದೊಂದು ಬದಲಾವಣೆ ಅಗತ್ಯವಿತ್ತು!

- Advertisement -G L Acharya panikkar
- Advertisement -

ಕೋವಿಡ್‌ನಿಂದಾಗಿ ಪ್ರತಿಯೊಬ್ಬರ ಜೀವನ ಕತ್ತಲೆಯ ಕೂಪಕ್ಕೆ ತಳ್ಳಲ್ಪಟ್ಟು, ಆರ್ಥಿಕ ಸ್ಥಿತಿ ಸುಧಾರಣೆ ಹೇಗೆ ಎನ್ನುವ ಆತಂಕ ಎದುರಾಗಿತ್ತು. ಯಕ್ಷಗಾನ ಕಲಾವಿದರ ಸ್ಥಿತಿ ಇದಕ್ಕೆ ಹೊರತಾಗಿಲ್ಲ! ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೆ ಯಕ್ಷಗಾನವನ್ನೆ ಜೀವನವನ್ನಾಗಿಸಿಕೊಂಡು, ಅದುವೇ ನಮ್ಮ ಪ್ರಪಂಚವೆಂದು ಸಂಸಾರ ನಿರ್ವಹಣೆಗೈಯುತ್ತಿರುವ ಯಕ್ಷಗಾನ ಕಲಾವಿದರೂ ಈಗಲೂ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.


 
ಸಾಮಾನ್ಯವಾಗಿ ಯಕ್ಷಗಾನ ಕಲಾವಿದರನ್ನು ಕೆಲಸಕ್ಕೆ ಕರೆಯುವುದಿಲ್ಲ!ಇಲ್ಲಿ ಕಲಾವಿದರ ಕುರಿತಾಗಿರುವ ಗೌರವವೊ ಅಥವಾ ಅವರು ಏನು ಕೆಲಸ ಮಾಡುತ್ತಾರೆ ಎನ್ನುವ ತಾತ್ಸಾರವೊ!ಈ ರೀತಿಯ ಮನಃಸ್ಥಿತಿಯಿಂದಾಗಿ ಕಲಾವಿದರು ಕೆಲಸವಿಲ್ಲದೆ ಆರ್ಥಿಕವಾಗಿ ತೊಂದರೆಗೀಡಾಗಿರುವುದು ಸುಳ್ಳಲ್ಲ!ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲುವುದಿಲ್ಲ!ಎನ್ನುವ ಮಾತು ಸರ್ವಕಾಲಿಕ ಸತ್ಯ!ಕಲಾವಿದರಾದವರು ದುಡಿಮೆಯಿರುವಾಗ ಅಲ್ಪಸ್ವಲ್ಪ ದುಡಿದು ಸಂಗ್ರಹಿಸಿರುವುದು, ಕೆಲಸವಿಲ್ಲದೆ ಮನೆಯಲ್ಲಿ ಕುಳಿತರೆ ಎಷ್ಟು ದಿನ ಸಾಲುತ್ತೆ?ಸಂಸಾರ ನಿರ್ವಹಣೆ ಹೇಗೆ?ಅಭಿಮಾನಿಗಳು ಸಹಾಯ ಮಾಡುತ್ತಾರೆ ಎನ್ನುವ ನಿರೀಕ್ಷೆಯಿದ್ದರೂ ವ್ಯವಹಾರವಿಲ್ಲದೆ ಅವರ ಪರಿಸ್ಥಿತಿಯೂ ಕಷ್ಟವಿರುವಾಗ ಸಮಸ್ಯೆ ಯಾರಲ್ಲಿ ಹೇಳಿಕೊಳ್ಳುವುದು..ಹೀಗೆ ಕಲಾವಿದರ ಜೀವನ ಎನ್ನುವುದು ಕತ್ತಲೆಯ ಕೂಪದಲ್ಲಿ ಕಳೆಯುವಂತಾಯಿತೆ ಎನ್ನುವಾಗ ಬೆಳಕಾಗಿ ಬಂದವರು ಯಕ್ಷದ್ರುವ ಪಟ್ಲ.

ಕಲಾವಿದರ ಕಣ್ಣೀರನ್ನು ಪ್ರಥಮವಾಗಿ ಒರೆಸಿದವರು ಯಕ್ಷಧ್ರುವ ಪಟ್ಲ ಫೌಂಡೇಶನ್!ಕಲಾವಿದರ ಕಿರು ಪರಿಚಯ, ಸಂಪರ್ಕ ಸಂಖ್ಯೆ ಸಾಮಾಜಿಕ ಜಾಲತಾಣದ ಮೂಲಕ ಆಹ್ವಾನಿಸಿ ಸಾವಿರಕ್ಕೂ ಅಧಿಕ ಮೌಲ್ಯದ ಆಹಾರ ಸಾಮಾಗ್ರಿ ತಲುಪಿಸಿ ಕಲಾವಿದರೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡಿದ್ದರು. ಪಟ್ಲ ಫೌಂಡೇಶನ್ ಪ್ರಾರಂಭಿಸಿ ಕಲಾವಿದರಿಗಾಗಿ ಇನ್‌ಶ್ಯೂರೆನ್ಸ್ ಪಾಲಿಸಿ ಮಾಡಿಸಿದ ಕೀರ್ತಿ ಇವರದು. ಕಲಾವಿದರಿಗೆ ಆಟೋಟ ಸ್ಪರ್ಧೆ ಏರ್ಪಡಿಸಿ ಕಲಾವಿದರನ್ನು ಒಗ್ಗೂಡಿಸಿದರು. ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸ್ವತಃ ಕಲಾವಿದರಾಗಿ ಕಲಾವಿದರ ಸಮಸ್ಯೆ ಅರಿತುಕೊಂಡಿರುವ ಅವರು ಧ್ವನಿಯಿಲ್ಲದ ಕಲಾವಿದರ ಧ್ವನಿಯಾದರು.


 
ವೈಜ್ಞಾನಿಕವಾಗಿ ಬೆಳೆದು ಟಿವಿ ಮಾಧ್ಯಮ, ಮೊಬೈಲ್ ಬಳಕೆ ಹೆಚ್ಚಿದಂತೆ ಅದುವೇ ತಮ್ಮ ಜೀವನವೆಂದು ನಂಬಿದ ಯುವಸಮೂಹವನ್ನು ಯಕ್ಷಗಾನ ಕ್ಷೇತ್ರದತ್ತ ಸೆಳೆಯುವಂತೆ ಮಾಡಿದರು!ಮಂಗಳೂರಿನಂತ ನಗರದಲ್ಲಿ ಮನುಷ್ಯ ಸಂಚಾರವಿಲ್ಲದೆ, ವಾಹನಗಳ ಶಬ್ದಗಳಿಲ್ಲದೆ ನಿಶ್ಯಬ್ಧವಾಗಿರುವ ನಡುರಾತ್ರಿಯಲ್ಲಿ ಬೈಕ್-ಕಾರುಗಳು ಬುರ್ರೆಂದು ಹೋಗುವಂತೆ ಮಾಡಿ ಯಕ್ಷಗಾನ ಕ್ಷೇತ್ರದಲ್ಲಿ ಹೊಸ ಬಾಷ್ಯ ಬರೆದವರು ಪಟ್ಲ ಸತೀಶ್ ಶೆಟ್ಟಿ ಎಂದರೂ ತಪ್ಪಿಲ್ಲ!ಪ್ರತಿಭೆಯಿಂದ ಪಟ್ಲರ ಕೀರ್ತಿ ಜಗದಗಲ ವಿಸ್ತರಿಸಿದಂತೆ ಆ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದು ಸಾಮ್ರಾಜ್ಯ ಕಟ್ಟಿದ್ದೇವೆಂದು ಅಹಂಕಾರದಿಂದ ವರ್ತಿಸುತ್ತಿದ್ದವರ ಎದೆಯಲ್ಲಿ ನಡುಕ ಪ್ರಾರಂಭವಾಗಿರುವುದು ಸುಳ್ಳಲ್ಲ!ಇದೇ ರೀತಿ ಕಲಾವಿದರ ವಿಶ್ವಾಸ ತೆಗೆದುಕೊಂಡು, ಪ್ರತಿಭೆ ಮೆರೆಯುತ್ತಿದ್ದರೆ ನಮ್ಮ ಭವಿಷ್ಯ ಹೇಗೆ ಎಂದು ಚಿಂತೆ ಹೆಚ್ಚಿದಂತೆ ಪಟ್ಲರನ್ನು ತುಳಿಯಬೇಕೆಂದು ಕೆಲವು ವಿಷಸರ್ಪಗಳು ತಲೆಯೆತ್ತಿದವು.


 
ಪಟ್ಲರ ಕೀರ್ತಿ ವ್ಯಾಪಿಸುತ್ತಿದ್ದಂತೆ ಅವರನ್ನು ಯಕ್ಷಗಾನ ರಂಗದಲ್ಲಿಯೆ ಅಪಮಾನ ಮಾಡಿದ ವ್ಯವಸ್ಥಿತ ಷಡ್ಯಂತ್ರ ಎಲ್ಲರಿಗೂ ತಿಳಿದಿದೆ. ಕಲಾವಿದರ ಪುಣ್ಯವೋ!ಕಲಾಭಿಮಾನಿಗಳ ಹಾರೈಕೆಯೊ!ಪಟ್ಲರ ಅಚಲ ನಿರ್ಧಾರವೊ!ಕಲಾಮಾತೆಯ ಆಶೀರ್ವಾದವೊ! ಪಟ್ಲರು ವರ್ಷದೊಳಗೆ ಯಕ್ಷಗಾನ ಪ್ರಪಂಚದಲ್ಲಿ ನೆಲಕ್ಕೆ ಬಡಿದ ಚೆಂಡಿನಂತೆ ಮತ್ತೆ ಪುಟಿದೆದ್ದರು. ಪಾವಂಜೆ ಸುಬ್ರಹ್ಮಣ್ಯ ಸನ್ನಿಧಿಯಿಂದ ಹೊಸ ಮೇಳ ಪ್ರಾರಂಭಿಸಿ, ಕಲಾವಿದರ ಪಾಲಿಗೆ ಆಶಾಕಿರಣವಾದರು. ಯಕ್ಷಗಾನದ ಇತಿಹಾಸದಲ್ಲಿಯೆ ಪ್ರಥಮವಾಗಿ ಕಲಾವಿದರಿಗಾಗಿ ಭವಿಷ್ಯನಿಧಿ, ಇಎಸ್‌ಐ ಸೌಲಭ್ಯ ಕಲ್ಪಿಸಿ ಇತರೆ ಮೇಳಗಳಿಗೆ ಮಾದರಿಯಾದರು. ಈ ರೀತಿಯಾಗಿ ಕೋವಿಡ್‌ನಿಂದ ಕಂಗೆಟ್ಟ ಯಕ್ಷಗಾನ ಪ್ರಪಂಚದಲ್ಲಿ ಕಲಾವಿದರ ಪಾಲಿಗೆ ಚಾಲೆಂಜಿಂಗ್ ಸ್ಟಾರ್ ಎನಿಸಿಕೊಂಡರು.

ಪ್ರತಿಯೊಬ್ಬರ ಬಾಯಲ್ಲಿಯೂ ಯಕ್ಷಗಾನದಲ್ಲಿ ಇಂತದ್ದೊಂದು ಬದಲಾವಣೆ ಬೇಕಿತ್ತು ಎನ್ನುವಷ್ಟರ ಮಟ್ಟಿಗೆ ಮನೆಮಾತಾದರು. ಕಾಲೇಜು ಶಿಕ್ಷಣ ಪಡೆಯಲು ಮಂಗಳೂರಿನಲ್ಲಿದ್ದಾಗಪಟ್ಲರ ಹಾಡು ಕೇಳಲು ನಾನು ಗೆಳೆಯರೊಂದಿಗೆ ತಡರಾತ್ರಿಯಲ್ಲಿ ತೆರಳುತ್ತಿದ್ದೆವು. ಅದಕ್ಕಿಂತಲೂ ಮುಖ್ಯವಾಗಿ ಪಟ್ಲ ಸಾರಥ್ಯದ ಪಾವಂಜೆ ಮೇಳದಲ್ಲಿ ಧರ್ಮಸ್ಥಳ ಕೇಂದ್ರದಲ್ಲಿ ನನ್ನ ತೆಂಕುತಿಟ್ಟಿನ ಇಬ್ಬರು ಗುರುಗಳಾದ ದಿವಾಣ ಶಿವಶಂಕರ ಭಟ್ ಹಾಗೂ ಚೆಂಡೆಯ ಗಂಡುಗಲಿ ಪದ್ಮನಾಭ ಉಪಾಧ್ಯಾಯರು ಇದ್ದಾರೆನ್ನುವುದಕ್ಕೆ ಹೆಮ್ಮೆ. ಜರ್ಮನ್ ಟೆನ್ನಿಸ್ ಆಟಗಾರ ಬೋರಿಸ್ ಬೆಕ್ಕರ್ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ ಹೇಳಿದ ಮಾತು ಎಲ್ಲಿಯೊ ಓದಿದ ನೆನಪು.I can’t change history, I don’t want to change history. I can only change the future. I’m working on that. ಪಟ್ಲರ ಸಾಧನೆ, ಅವರ ನಡೆ ಗಮನಿಸಿದರೆ ಯಕ್ಷಗಾನ ಕಲಾವಿದರ ಭವಿಷ್ಯದ ಬದಲಾವಣೆ ಪರ್ವ ಪ್ರಾರಂಭವಾಗಿದೆ ಎನ್ನುವುದು ಸ್ಪಷ್ಟ!
ಶುಭವಾಗಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಗೂ ಜ್ಞಾನಶಕ್ತಿ ಪಾವಂಜೆ ಯಕ್ಷಗಾನ ಮೇಳ

✍️✍️✍️
ಸಂದೇಶ್ ಶೆಟ್ಟಿ ಆರ್ಡಿ
ಯಕ್ಷಗಾನ ಕಲಾವಿದ  

- Advertisement -

Related news

error: Content is protected !!