



ವಿಟ್ಲ: ಆ. 22 ರಂದು ನಡೆದ ಎಸ್‌ಸಿಡಿಸಿಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತ 10ನೇ ಬಾರಿಗೆ ವಿಶೇಷ ಪ್ರೋತ್ಸಾಹಕ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ.
2025-26 ನೇ ಆರ್ಥಿಕ ಸಾಲಿನಲ್ಲಿ ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. 238 ಕೋಟಿ ವ್ಯವಹಾರ, ರೂ. 39.60 ಕೋಟಿ ಠೇವಣಿ, ರೂ. 41.61 ಕೋಟಿ ಸಾಲ ಹಾಗೂ ರೂ. 1.47 ಕೋಟಿ ಲಾಭ ಗಳಿಸಿ ಅಭೂತಪೂರ್ವ ಸಾಧನೆ ಮಾಡಿದ್ದು, ಈ ಸಾಧನೆಯನ್ನು ಗುರುತಿಸಿ 2025-26 ನೇ ಸಾಲಿನ ವಿಶೇಷ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನರ್ಸಪ್ಪ ಪೂಜಾರಿ ವೈ. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್ವರ ಬಿ. ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್, ಸಂಘದ ನಿರ್ದೇಶಕರಾದ ಮಹಾಬಲೇಶ್ವರ ಭಟ್ ಎ, ಶ್ರೀ ಉದಯಕುಮಾರ್, ಶ್ರೀ ದಿನೇಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.








