Friday, March 29, 2024
spot_imgspot_img
spot_imgspot_img

ಮರೆಯದಿರೋಣ ಫೆ.14 “ದೇಶ ಪ್ರೇಮಿಗಳ ದಿನ”

- Advertisement -G L Acharya panikkar
- Advertisement -

ಇಂದಿನಿಂದ ಸರಿಯಾಗಿ ಎರಡು ವರುಷಗಳ ಹಿಂದೆ 2019 ಫೆಬ್ರವರಿ 14 ರಂದು ಜಮ್ಮುವಿನಿಂದ ಶ್ರೀನಗರಕ್ಕೆ ಸರಿಸುಮಾರು 2,500 ಕೇಂದ್ರ ಮೀಸಲು ಪೋಲಿಸ್ ಪಡೆಯ (CRPF) ಸಿಬ್ಬಂದಿಗಳನ್ನ ಹೊತ್ತ 78 ವಾಹನಗಳು ಹೊರಟೆಬಿಟ್ಟಿತು, ಅಬ್ಬಬ್ಬಾ ಸೂರ್ಯನ ಛಾಯೆಯಂತೆ ಹೊಳೆಯುತ್ತಿದ್ದ ಸೈನಿಕರು ಒಂದು ಕಡೆಯಾದರೆ, ತನ್ನ ಮಗ, ತನ್ನ ಗಂಡ ದೇಶ ಸೇವೆ ಗೈಯುತ್ತಿದ್ದಾನೆ ಎಂದು ಎದೆಯುಬ್ಬಿಸಿ ನಡೆಯುತ್ತಿದ್ದ ಮನೆಯವರ (ಭಯದ) ಸಂತೋಷ ಇನ್ನೊಂದು ಕಡೆ, ನಾನಿಲ್ಲಿ “ಭಯದ ಸಂತೋಷ ಏಕೆ ಹೇಳಿದೆ ಎಂದರೆ ಸೈನಿಕರ ಜೀವನವೆ ಅಂತಹದ್ದು. ಇನ್ನೆನೊ ಕೆಲವೇ ದಿನಗಳಲ್ಲಿ ಮನೆ ತಲುಪಬೇಕು ಎಂದು ಅದೆಷ್ಟೋ ಕನಸುಗಳನ್ನು ಕಾಣುತ್ತಾ ದಿನ ನೋಡುತ್ತಿದ್ದ ಸೈನಿಕ‌ ದೇಶ ಸೇವೆಗೆ ಹೊರಟೆಬಿಟ್ಟ, ಆದರೆ ವಿಧಿಯ ಲೀಲೆ ಅದು ಬೇರೆಯದ್ದೆ ಆಗಿತ್ತು.

ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭದ್ರತಾ ಸಿಬ್ಬಂದಿಗಳನ್ನು ಸಾಗಿಸುವ ವಾಹನ ಅವಾಂತಿಪುರ ಬಳಿಯ ಲೆಥ್ಪೊರ ತಲುಪುವಷ್ಟರಲ್ಲಿ ವಾಹನದ ಜೊತೆಗೆ 40 ಜನ ಯೋಧರ ದೇಹ ಛಿದ್ರ ಛಿದ್ರವಾಗಿ ಬಿದ್ದಿತ್ತು, ಕೆಲವೇ ನಿಮಿಷಗಳಲ್ಲಿ ಸ್ಮಶಾನ ಮೌನ ಆವರಿಸಿತ್ತು, ಕೆಲವು ಸೆಕೆಂಡ್‌ಗಳ ಹಿಂದೆ ದೇಶ ಸೇವೆ ಗೈಯುತ್ತಿದ್ದ ಯೋಧ ದೇಶಕ್ಕಾಗಿ ಹುತಾತ್ಮನಾಗಿ ಹೋಗಿದ್ದ, ಮನೆಯಲ್ಲಿ ತಾಯಿ ದೇವರಿಗೆ ಇಟ್ಟ ದೀಪ ಆರಿ ಹೋಗಿತ್ತು, ಹೆಂಡತಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಕಳಚಿ ಬಿದ್ದಿತ್ತು, ಜೊತೆಗೆ ಇದ್ದ ಗೆಳೆಯ ಮಾಂಸದ ತುಂಡುಗಳಾಗಿ ಬಿದ್ದಿದ್ದ. 1989 ರಿಂದೀಚೆಗೆ ರಾಷ್ಟ್ರ ಭದ್ರತಾ ಸಿಬ್ಬಂದಿಗಳ ಮೇಲೆ ನಡೆದ ಭೀಕರ ಮಾರಣಾಂತಿಕ ಭಯೋತ್ಪಾದಕ ದಾಳಿ ಅದಾಗಿತ್ತು ಅದೇ “ಪುಲ್ವಾಮಾ ದಾಳಿ”.

“ಪುಲ್ವಾಮಾ ದಾಳಿ” ಭಾರತೀಯ ಇತಿಹಾಸದಲ್ಲಿ ನಾವು ಮರೆಯಲಾಗದ ದಿನವಾಗಿ ಬಿಟ್ಟಿತು, ಪಾಪಿ ಪಾಕಿಸ್ತಾನ ಈ ದಿನಕ್ಕಾಗಿ ಹೊಂಚುಹಾಕಿ ಕುಳಿತಿತ್ತು, ಅದೊಂದು ಕರಾಳ ದಿನ 2019 ಫೆ.14 ಸರಿಸುಮಾರು ಮಧ್ಯಾಹ್ನ 3.15 ರ ಸಮಯ ಭದ್ರತಾ ಸಿಬ್ಬಂದಿಗಳ ಬಸ್ಸಿಗೆ 300 ಕೆಜಿಗೂ ಹೆಚ್ಚು ಸ್ಫೋಟಕಗಳು 80 ಕೆಜಿಗೂ ಹೆಚ್ಚು ಆರ್ಡಿಎಕ್ಸ್ ( RDX) ಅಮೋನಿಯಂ ನೈಟ್ರೇಟ್ ತುಂಬಿಕೊಂಡು ಬರುತ್ತಿದ್ದ ಆತ್ಮಹತ್ಯಾ ಬಾಂಬರ್ ಇಕೋ ಕಾರೊಂದು 76 ಬಟಾಲಿಯನ್ ನ 40 ಮಂದಿ ಸೈನಿಕರನ್ನು ಬಲಿಪಡೆದುಕೊಂಡಿತು ಈ ಘಟನೆಯಲ್ಲಿ 40 ಮಂದಿ ಹುತಾತ್ಮರಾದರೆ 35 ಯೋಧರಿಗೆ ತೀವ್ರವಾದ ಗಾಯಗಳಾದವು, ದಾಳಿಯ ಸಂಪೂರ್ಣ ಜವಾಬ್ದಾರಿಯನ್ನು ಪಾಪಿ ಪಾಕಿಸ್ತಾನದ ಮೂಲದ ಇಸ್ಲಾಮ್ ಉಗ್ರಗಾಮಿ ಸಂಘಟನೆ ಜೈಷ್- ಎ- ಮೊಹಮದ್ ಹೊತ್ತುಕೊಂಡಿತ್ತು, ಆದಿಲ್ ಅಹ್ಮದ್ ದಾರ್ ಎಂಬ ಹೆಸರಿನ ಉಗ್ರಗಾಮಿ ಬಾಂಬರ್ ಕಾರನ್ನು ಚಲಾಯಿಸಿ ಆಕ್ರಮಣವನ್ನು ಮಾಡಿದ್ದ, 18 ವರ್ಷಗಳಿಂದ CRPF ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕದ ಮಂಡ್ಯ ಗುಡಿಗೆರೆಯ ಯೋಧ ಹೆಚ್. ಗುರು ಕೂಡ ಈ ದಾಳಿಯಲ್ಲಿ ಹುತಾತ್ಮರಾದರು.

ಪಾಶ್ಚಾತ್ಯ ಸಂಸ್ಕೃತಿಗಳ ಪ್ರಭಾವದ ಒಳಗಡೆ ಸಿಲುಕಿರುವ ನಮ್ಮ ಯುವ ಪೀಳಿಗೆ ಇಂದು ಎಲ್ಲಿಂದರಲ್ಲಿ ಪ್ರೇಮಿಗಳ ದಿನ ಆಚರಿಸುತ್ತಿದೆ, ಪಬ್, ಬಾರ್, ಮಾಲುಗಳಲ್ಲಿ ಫೆಬ್ರವರಿ 14 ಅವರದ್ದೇ ದರ್ಬಾರ್, ಮೈಮರೆತು ಕುಣಿಯುವ ಪ್ರೇಮಿಗಳಿಗಂತೂ ನಮ್ಮಲ್ಲಿ‌ ಕೊರತೆಯಿಲ್ಲ, ನಮಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ, ನಮ್ಮ ಇಂದಿನ ಸಂತೋಷಕ್ಕಾಗಿ ತಮ್ಮ ಸಂತೋಷಗಳನ್ನು ತ್ಯಾಗ ಮಾಡಿ ಹುತಾತ್ಮರಾದ ಯೋಧರ ಬಗ್ಗೆ ಯಾವತ್ತಾದ್ರೂ ಯೋಚಿಸಿದ್ದೇವಾ?, ಇಂದಿಗೂ ಕಣ್ಣೀರಲ್ಲೇ ಮುಳುಗಿರುವ ಅವರ ಮನೆಯವರ ಬಗ್ಗೆ ನಾವೆಷ್ಟು ತಿಳಿದಿದ್ದೇವೆ? ಇಂದಿಗೂ ನಮಗಾಗಿ ಗಡಿಯಲ್ಲಿ ಪ್ರಾಣ ಕೊಡಲು ಸಿದ್ದರಾಗಿ ನಿಂತಿರುವ ವೀರ ಯೋಧರಿಗೆ ಗೌರವ ನೀಡಿದ್ದೇವಾ?, ಇನ್ನಾದರೂ ಪಾಶ್ಚಾತ್ಯ ಆಚರಣೆಗಳಿಗೆ ಪೂರ್ಣವಿರಾಮ ಹಾಕಬಹುದಲ್ಲವೇ? ಇಂದಿನ ಯುವ ಪೀಳಿಗೆ ನಮ್ಮಿಂದ ಸರಿಯಾಗಬೇಕಿದೆ, ನಾವೆಲ್ಲರೂ ಪ್ರೇಮಿಗಳ ದಿನ ಆಚರಿಸೋಣ‌! ಆದರೆ ನಾವು ಆಚರಿಸುವ ಪ್ರೇಮಿಗಳ ದಿನ ಅದು ” ದೇಶ ಪ್ರೇಮಿಗಳ ದಿನ” ಆಗಿರಲಿ.

“ನನ್ನ ದೇಶ, ನನ್ನ‌ ಸೈನಿಕ ಅದು ನನ್ನ ಹೆಮ್ಮೆ”

✍️✍️ಶೈಲೇಶ್ ಕುಮಾರ್ ಶೆಟ್ಟಿ, ಮೂಡೈಮಾರುಗುತ್ತು

- Advertisement -

Related news

error: Content is protected !!