Friday, May 3, 2024
spot_imgspot_img
spot_imgspot_img

ಮಂಗಳೂರು: ಸೌದಿಯಲ್ಲಿ ಇನ್ನೋರ್ವ ಕರಾವಳಿಗ ಬಂಧಿ; ಪತ್ನಿ ಮಕ್ಕಳ ಕಣ್ಣೀರು..!!

- Advertisement -G L Acharya panikkar
- Advertisement -

ಮಂಗಳೂರು: ಕುಂದಾಪುರದ ಹರೀಶ್‌ ಬಂಗೇರಾ ರೀತಿಯದ್ದೇ, ಇನ್ನೊಂದು ಪ್ರಕರಣದಲ್ಲಿ ತಾನು ಮಾಡದಿರುವ ತಪ್ಪಿಗೆ ಸೌದಿ ಅರೇಬಿಯಾದಲ್ಲಿ ಮಂಗಳೂರಿನ ವ್ಯಕ್ತಿಯೋರ್ವರು ಬಂಧಿತರಾಗಿದ್ದಾರೆ.

ಈ ಬಗ್ಗೆ ಅಲ್ಲಿರುವ ಭಾರತದ ರಾಯಭಾರ ಕಚೇರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೊಂದ ಕುಟುಂಬ ಕಣ್ಣೀರಿಟ್ಟಿದೆ. ಫೇಸ್‌ ಬುಕ್ ನಲ್ಲಿ ಸೌದಿ ದೊರೆ ಮತ್ತು ಇಸ್ಲಾಂ ವಿರುದ್ಧ ಪೋಸ್ಟ್‌ ಹಾಕಿದ್ದಾರೆ ಎಂಬ ಸುಳ್ಳು ಆರೋಪದಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಸೌದಿಯಲ್ಲಿ ಬಂಧನನಲ್ಲಿರುವ ಮಂಗಳೂರಿನ ಶೈಲೇಶ್ ಕೊಟ್ಟಾರಿ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

ನಗರದ ಬಿಕರ್ನಕಟ್ಟೆಯ ಶೈಲೇಶ್‌ ಎಂಬಾತ ಕಳೆದ 25 ವರ್ಷಗಳಿಂದ ಸೌದಿ ಅರೇಬಿಯಾ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ತನ್ನ ಫೇಸ್‌ಬುಕ್‌ನಲ್ಲಿ ದೇಶಪ್ರೇಮವನ್ನು ವ್ಯಕ್ತಪಡಿಸಿ ಪೋಸ್ಟ್‌ ಹಾಕುತ್ತಿದ್ದರು. ಇದನ್ನು ಫೇಸ್‌ಬುಕ್‌ನಿಂದ ತೆಗೆಯಬೇಕು ಇಲ್ಲದಿದ್ದರೆ ನಿನ್ನನ್ನು ಸೌದಿಯಲ್ಲಿ ಉಳಿಯಲು ಬಿಡುವುದಿಲ್ಲ ನಿನ್ನನ್ನು ಸೌದಿಯಲ್ಲೇ ಮುಗಿಸಿ ಹಾಕುತ್ತೇನೆ ಎಂಬ ಬೆದರಿಕೆ ಕರೆ ಬಂದಿತ್ತು ಎನ್ನಲಾಗಿದೆ. ಇದರಿಂದ ಬೆದರಿದ ಶೈಲೇಶ್‌ ತಮ್ಮ ಹೆಸರಿನ ಫೇಸ್‌ಬುಕ್‌ ಖಾತೆಯನ್ನೇ ಅಳಿಸಿ ಹಾಕಿದ್ದಾರೆ.

ನಂತರ 2020 ಜನವರಿ 16ರಂದು ಫೇಸ್‌ಬುಕ್‌ನಲ್ಲಿ ಶೈಲೇಶ್‌ ಕುಮಾರ್‌ ಅವರ ಹೆಸರಲ್ಲಿ ಫೇಕ್‌ ಐಡಿ ಸೃಷ್ಟಿಯಾಗಿದ್ದು, ಅದರಲ್ಲಿ ಫೆ.12 ಮತ್ತು 15ರಂದು ಇಸ್ಲಾಂ ವಿರೋಧಿ ಪೋಸ್ಟ್‌ಗಳು ಹಾಗೂ ಸೌದಿ ದೊರೆಯ ಬಗೆಗಿನ ವಿರುದ್ಧ ಅನೇಕ ಪೋಸ್ಟ್‌ ಹಾಕಲಾಗಿತ್ತು.

ಈ ಬಗ್ಗೆ ಶೈಲೇಶ್ ತಾನು ಕೆಲಸ ಮಾಡುವ ಕಂಪೆನಿಗೆ ಮಾಹಿತಿ ನೀಡಿದಾಗ, ಕಂಪೆನಿ ಪೊಲೀಸರಿಗೆ ದೂರು ನೀಡುವಂತೆ ಸೂಚಿಸುತ್ತಾರೆ. ಅದರಂತೆ 2020ರ ಫೆ.23ರಂದು ಖುದ್ದು ದೂರು ನೀಡಲು ಪೊಲೀಸ್‌ ಠಾಣೆಗೆ ತೆರಳಿದಾಗ, ಅಲ್ಲಿನ ಪೊಲೀಸರು ಶೈಲೇಶ್‌ ಕುಮಾರ್‌ ಅವರನ್ನೇ ಬಂಧಿಸಿರುತ್ತಾರೆ. ಇದನ್ನರಿತ ಕುಟುಂಬ ಮಂಗಳೂರು ನಗರ ಸೈಬರ್‌ ಕ್ರೈಂ ಠಾಣೆಗೂ, 2021 ಆ.28ರಂದು ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೂ ದೂರು ನೀಡಿದ್ದರು. ಈ ಬಗ್ಗೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮುಖಾಂತರ ವಿದೇಶಾಂಗ ಇಲಾಖೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೈಲೇಶ್ ಪತ್ನಿ ಸರಿತಾ ತಿಳಿಸಿದ್ದಾರೆ.

ತಿಂಗಳಿಗೊಂದು ಸಲ ದೂರವಾಣಿ ಮುಖಾಂತರ ಮಾತನಾಡುತ್ತಿದ್ದರು. ಆದರೆ ಕಳೆದ 8-9 ತಿಂಗಳಿಂದ ಸಂಪರ್ಕ ಕಡಿತಗೊಂಡಿತ್ತು. 2 ತಿಂಗಳ ಹಿಂದೆ ಕರೆ ಮಾಡಿ ಕೋರ್ಟಿಗೆ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ ಆ ನಂತರ ಬೆಳವಣಿಗೆ ಏನಾಗಿದೆ ಎಂಬುವುದು ಗೊತ್ತಿಲ್ಲ. ಅವರ ಕಂಪನಿ ಸಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಅವರು ದೂರವಾಣಿ ಕರೆಯಲ್ಲಿ ಕೇವಲ 2ರಿಂದ 3 ನಿಮಿಷ ಮಾತನಾಡುತ್ತಾರೆ.

ಇದು ಇಸ್ಲಾಂ ಅಥವಾ ಸೌದಿ ದೊರೆಯ ಅವಹೇಳನ ಬಗ್ಗೆ ಪ್ರಕರಣ ಆದುದರಿಂದ ಭಾರತದ ಯಾವೂದೇ ಸಂಘ, ಸಂಸ್ಥೆ ಅಥವಾ ವ್ಯಕ್ತಿಗಳು ನೇರವಾಗಿ ಮುಂದೆ ಬರಲು ತಯಾರಿಲ್ಲ. ಜೊತೆಗೆ ನ್ಯಾಯವಾದಿಗಳು ಸಹ ಮುಂದೆ ಬರುತ್ತಿಲ್ಲ ಎಂದು ಸರಿತಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಪತಿಯ ಬರುವಿಕೆಗಾಗಿ ಸರಿತಾ, ಮಕ್ಕಳು ಕಾಯುತ್ತಿದ್ದಾರೆ. ಈ ಹಿಂದೆ ಇಂತಹದೇ ಪ್ರಕರಣದಲ್ಲಿ ಕುಂದಾಪುರದ ಹರೀಶ್‌ ಬಂಗೇರ ಬಂಧನಕ್ಕೊಳಕ್ಕಾಗಿ ನಂತರ ತಾಯ್ನಾಡಿಗೆ ಮರಳಿದ್ದರು.

ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್‌ ಖಾತೆ ತೆರೆದು ಯಾರೋ ಮಾಡಿರುವ ಕೃತ್ಯಕ್ಕೆ ಶೈಲೇಶ್ ಜೈಲು ವಾಸ ಅನುಭವಿಸುವಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರದ ವಿದೇಶಾಂಗ ಸಚಿವಾಲಯ ತಕ್ಷಣ ಮುತುವರ್ಜಿ ವಹಿಸಿ ಶೈಲೇಶ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸೌದಿಯಂತಹ ರಾಷ್ಟ್ರದಲ್ಲಿ ಇಂತಹ ಸೂಕ್ಷ್ಮ ಪ್ರಕರಣಗಳನ್ನು ಇತರ ಸಂಘಟನೆಗಳು ನಿರ್ವಹಿಸುವುದು ಕಷ್ಟ ಎಂದು ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!