Wednesday, April 24, 2024
spot_imgspot_img
spot_imgspot_img

ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ V/s ಕಂಗನಾ ವಿವಾದ: ದೂರ ಉಳಿಯಲು ಕಾಂಗ್ರೆಸ್ ಯತ್ನ

- Advertisement -G L Acharya panikkar
- Advertisement -

ಮಹಾರಾಷ್ಟ್ರದ ಆಡಳಿತ ಪಕ್ಷ ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರಾಣಾವತ್ ನಡುವಿನ ಜಟಾಪಟಿಯಿಂದ ದೂರ ಉಳಿಯಲು ಕೇಂದ್ರ ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಎಐಸಿಸಿಯ ಮೂವರು ವಕ್ತಾರರು ವಿವಾದದಿಂದ ದೂರವಿರಲು ಪಕ್ಷವು ತತ್ವಬದ್ಧವಾದ ನಿಲುವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

“ಹೌದು, ಇದು ಹೆಚ್ಚು ರಾಜಕೀಯಗೊಳಿಸಿದ ವಿಷಯವಾಗಿದೆ. ಬಿಜೆಪಿ ಬಯಸುವುದು ಕೂಡ ಇದನ್ನೇ. ಕೋವಿಡ್ ಮತ್ತು ಆರ್ಥಿಕತೆಯಂತಹ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸದಂತೆ ಅವರು ಇಡೀ ರಾಜಕೀಯವನ್ನು ವಿವಾದಕ್ಕೆ ಎಳೆಯಲು ಬಯಸುತ್ತಾರೆ ” ಆದ್ದರಿಂದ, ಇದರಿಂದ ದೂರವಿರಲು ಮತ್ತು ಅವರ ಬಲೆಗೆ ಬೀಳದಂತೆ ನಾವು ತತ್ವಬದ್ಧವಾದ ನಿರ್ಧಾರ ತೆಗೆದುಕೊಂಡಿದ್ದೇವೆ ಎಐಸಿಸಿ ಮಾಧ್ಯಮ ವಿಭಾಗದ ಮುಖಂಡರೊಬ್ಬರು ಹೇಳಿದ್ದಾರೆ.

ನಟಿ ಕಂಗನಾ ರಾಣಾವತ್ ಬಾಲಿವುಡ್‌ನಲ್ಲಿ ಡ್ರಗ್ ಮಾಫಿಯಾ ಆದೆ ಎಂಬ ಆರೋಪ ಮತ್ತು ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವಿನ ಬಗ್ಗೆ ಮುಂಬೈ ಪೊಲೀಸರಿಗೆ ಸಂಬಂಧಿಸಿದಂತೆ ಟ್ವೀಟ್‌ಗಳನ್ನು ಮಾಡುವ ಮೂಲಕ ವಿವಾದವನ್ನು ಆರಂಭಿಸಿದ್ದರು. ನಾನು ಮುಂಬೈ ಪೊಲೀಸರಿಗೆ ಹೆದರುತ್ತಿದೆ. ಮುಂಬೈ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಕಾಣುತ್ತಿದೆ ಎಂಬಂತ ಹೇಳಿಕೆಗಳು ಶಿವಸೇನೆಯನ್ನು ಹೆಚ್ಚು ಕೆಣಕಿದ್ದವು.

ಮಹಾರಾಷ್ಟ್ರದ ಜನರು, ಬಾಲಿವುಡ್ ನಟಿ-ನಟಿಯರು, ಸರ್ಕಾರದ ಸಚಿವರು ಆಕೆಯ ಹೇಳಿಕೆಗಳ ಬಗ್ಗೆ ಅಸಮಾಧಾನ, ಆಕ್ರೋಶ ಹೊರಹಾಕಿದ್ದರು. ನಂತರ ಬುಧವಾರ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮುಂಬೈ ಪ್ರದೇಶದಲ್ಲಿನ ರನೌತ್ ಕಚೇರಿಯ ಭಾಗವನ್ನು ಧ್ವಂಸಗೊಳಿಸಿತು.

ಶಿವಸೇನಾ ಪ್ರಸ್ತುತ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಯೊಂದಿಗೆ ಪಾಲುದಾರರಾಗಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದೆ.

ಕೇಂದ್ರದ ಕಾಂಗ್ರೆಸ್ ನಾಯಕರು ಈ ವಿವಾದದಿಂದ ದೂರವೂಳಿಯಲು ನಿರ್ಧರಿಸಿದ್ದರೇ ಇತ್ತ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕರಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬರುತ್ತಿವೆ.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ನಟಿ ರಾಣಾವತ್ ವಿವಾದದ ಮೇಲೆ ಕೇಂದ್ರೀಕರಿಸುವುದಕ್ಕಿಂತ ಆಡಳಿತದಲ್ಲಿ ಕೋವಿಡ್ -19, ಆರ್ಥಿಕತೆ, ಚೀನಾದೊಂದಿಗಿನ ನಿಲುವು ಮುಂತಾದ ತುಂಬಾ ಮುಖ್ಯವಾದ ವಿಷಯಗಳಿವೆ ಎಂದು ತಿಳಿಸಿದ್ದಾರೆ.

“ಇದು ಕ್ರಿಮಿನಲ್ ಪ್ರಕರಣವಾಗಿದ್ದು, ಏಜೆನ್ಸಿಗಳು ತಮ್ಮ ಕೆಲಸವನ್ನು ಮಾಡಲಿ. ಕ್ರಿಮಿನಲ್ ಏಜೆನ್ಸಿಗಳಿಗೆ ಮಾಧ್ಯಮ ಅಥವಾ ಯಾವುದೇ ರಾಜಕೀಯ ಮುಖಂಡರ ಸಹಾಯ ಅಗತ್ಯವಿಲ್ಲ ”ಎಂದು ಚವಾಣ್ ಹೇಳಿದರು.

ಮಾಜಿ ಕೇಂದ್ರ ಸಚಿವ ಮಿಲಿಂದ್ ದಿವೋರಾ ಕೂಡ ರಾಜಕೀಯ ಬಿಟ್ಟು ಮುಖ್ಯವಾದ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಮುಂಬೈನ ಮಾಜಿ ಕಾಂಗ್ರೆಸ್ ಮುಖ್ಯಸ್ಥ ನಿರುಪಮ್ ಅವರು ಬಿಎಂಸಿಯ ಈ ಕ್ರಮವನ್ನು “ಪ್ರತೀಕಾರದ ಕ್ರಮ” ಎಂದು ಬಣ್ಣಿಸಿದ್ದಾರೆ. ಹೈಕೋರ್ಟ್ ಈ ಕ್ರಮವನ್ನು ತಪ್ಪೆಂದು ಪರಿಗಣಿಸಿ ತಕ್ಷಣ ಅದನ್ನು ತಡೆಹಿಡಿದಿದೆ. ಇಡೀ ಕ್ರಮವು ಪ್ರತೀಕಾರದಿಂದ ಕೂಡಿದೆ. ಆದರೆ ಸೇಡು ರಾಜಕೀಯದ ರಾಜಕಾರಣ ಬಹಳ ಚಿಕ್ಕದು ಎಂದು ಟ್ವೀಟ್ ಮಾಡಿದ್ದಾರೆ.

ಆದರೆ, ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ರಾಣಾವತ್ ಮಾಡಿದ ಆರೋಪಗಳಿಗೆ ಮಾತ್ರ ಪಕ್ಷ ಉತ್ತರಿಸುತ್ತದೆ ಎಂದರು. ನಾವು ಆಡಳಿತದತ್ತ ಗಮನ ಹರಿಸುತ್ತಿದ್ದೇವೆ. ಆದರೆ ಕಂಗನಾ ಮುಂಬೈಯನ್ನು ಪಿಒಕೆಗೆ ಸಮಾನ ಎಂದು ಕರೆಯುವಾಗ, ನಾವು ಮಾತನಾಡಬೇಕಾಗಿದೆ ಎಂದಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಬಿಎಂಸಿಯ ಕ್ರಮ ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದ್ದಿತ್ತು. ಮುಂಬೈನಲ್ಲಿ ಅಕ್ರಮ ನಿರ್ಮಾಣವು ಹೊಸತೇನಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಬಿಎಂಸಿಯ ಕ್ರಮವು ಜನರಿಗೆ ಅದರ ಬಗ್ಗೆ ಅನುಮಾನಗಳನ್ನು ಮೂಡಿಸಲು ಅವಕಾಶ ನೀಡುತ್ತದೆ ಎಂದರು. ಅದು “ಕಾನೂನುಬಾಹಿರ ಕಟ್ಟಡ ಇದೆಯೇ ಎಂದು ನನಗೆ ಗೊತ್ತಿಲ್ಲ. ನಾನು ಅದರ ಬಗ್ಗೆ ಸುದ್ದಿಯಲ್ಲಿ ಮಾತ್ರ ಓದಿದ್ದೇನೆ. ನಿಖರವಾದ ಮಾಹಿತಿಯಿಲ್ಲದೆ ಈ ಕುರಿತು ಪ್ರತಿಕ್ರಿಯಿಸುವುದು ನನಗೆ ಸೂಕ್ತವಲ್ಲ. ಬಿಎಂಸಿಗೆ ತನ್ನದೇ ಆದ ನಿಯಮಗಳಿವೆ ಮತ್ತು ಅವುಗಳಿಂದ ಕಾರ್ಯ ನಿರ್ವಹಿಸಿರಬಹುದು ಎಂದೂ ತಿಳಿಸಿದ್ದಾರೆ.

ಒಟ್ಟಾರೆ ನಟಿ ಕಂಗನಾ ಮುಂಬೈನಲ್ಲಿ ಹಚ್ಚಿರುವ ಕಿಚ್ಚು ಬಾಲಿವುಡ್ ಅಂಗಳ ಬಿಟ್ಟು ರಾಜಕೀಯ ಪಕ್ಷಗಳ ಜಟಾಪಟಿಗೆ, ಮೌನಕ್ಕೆ ಕಾರಣವಾಗಿದೆ. ಯಾವಾಗ ಬಿಜೆಪಿ ಕಂಗನಾ ರಾಣಾವತ್ ಬೆಂಬಲಕ್ಕೆ ನಿಂತು ಆಕೆಗೆ ವೈ-ಪ್ಲಸ್ ಭದ್ರತೆ ನೀಡಿತೋ ಆಗಿನಿಂದ ಟ್ವಿಟ್ಟರ್‌ನಲ್ಲಿ ಬಾಲಿವುಡ್ ಮಂದಿ ಕೂಡ ಈ ಬಗ್ಗೆ ವಿರೋಧವಾಗಿ ಟ್ವೀಟ್ ಮಾಡುವುದು ಬಿಟ್ಟಿದ್ದಾರೆ.

- Advertisement -

Related news

error: Content is protected !!