Wednesday, July 22, 2026
spot_imgspot_img
spot_imgspot_img

ಶಿವಮೊಗ್ಗ:ತ್ಯಾವರೆಕೊಪ್ಪ ಮೃಗಾಲಯದಲ್ಲಿ ನೀರಾನೆ ದಾಳಿಗೆ ಪಶುವೈದ್ಯೆ ಬಲಿ

- Advertisement -
- Advertisement -

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರು ಮೂಲದ ಡಾ.ಸಮೀಕ್ಷಾ ರೆಡ್ಡಿ (27) ಎಂದು ಗುರುತಿಸಲಾಗಿದೆ. ಸಮೀಕ್ಷಾ ಅವರು ಸಫಾರಿಯಲ್ಲಿ ಪಶುವೈದ್ಯ ಅಧಿಕಾರಿಯಾಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು. ಗುರುವಾರ ರಾತ್ರಿ 10:30ರ ಸುಮಾರಿಗೆ ಅವರು ಸನ್ ಕಾನರ್ ಹಕ್ಕಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11:45ರ ಸುಮಾರಿಗೆ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಆವರಣದ ಒಳಗೆ ಹೋಗಿದ್ದರು. ಈ ವೇಳೆ ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಮಾ.20) ಬೆಳಿಗ್ಗೆ 6:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.

ಪ್ರತಿ ಜೀವವೂ ಅಮೂಲ್ಯವಾದದ್ದು, ಸರ್ಕಾರವು ಮೃತ ವೈದ್ಯರ ಕುಟುಂಬದ ಪರವಾಗಿ ನಿಲ್ಲಲಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂತಾಪ ಸೂಚಿಸಿದ್ದಾರೆ.ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಅವರು ಆದೇಶಿಸಿದ್ದಾರೆ. ದುರಂತದ ಕುರಿತು ಹಿರಿಯ ಪಶುವೈದ್ಯರು ಹಾಗೂ ಅರಣ್ಯಾಧಿಕಾರಿಗಳ ತಂಡವು ಕೂಲಂಕುಷವಾಗಿ ತನಿಖೆ ನಡೆಸಲಿದೆ. ಘಟನೆ ಸಂಭವಿಸಲು ಕಾರಣಗಳೇನು? ಸುರಕ್ಷತಾ ಲೋಪಗಳಿವೆಯೇ ಎಂಬ ಬಗ್ಗೆ ತನಿಖೆ ನಡೆಸಿ, ಮುಂದಿನ 7 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಪಾಲಿಸಬೇಕಾದ ಪ್ರಮಾಣಿತ ಕಾರ್ಯಚರಣೆ ವಿಧಾನವನ್ನು ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಕಡ್ಡಾಯವಾಗಿ ಜಾರಿಗೊಳಿಸಬೇಕು. ವೈದ್ಯರು ಮತ್ತು ಸಿಬ್ಬಂದಿ ವನ್ಯಜೀವಿಗಳ ಹತ್ತಿರ ಹೋಗುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದ್ದಾರೆ. ಮೃತ ವೈದ್ಯೆಯ ಕುಟುಂಬಕ್ಕೆ ನಿಯಮಾನುಸಾರ ತಕ್ಷಣವೇ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!