Thursday, April 18, 2024
spot_imgspot_img
spot_imgspot_img

ಕಲಾ ಸಾಧಕ, ಯಕ್ಷ ಕಿನ್ನರ ಶಿವಾನಂದ್ ಶೆಟ್ಟಿ ಪೆರ್ಲ

- Advertisement -G L Acharya panikkar
- Advertisement -

ಚೈತ್ರ ಕಬ್ಬಿನಾಲೆ✍️: ಕರಾವಳಿ ಕರ್ನಾಟಕದ ಬಯಲು ವಿಶ್ವವಿದ್ಯಾಲಯವೇ ಯಕ್ಷಗಾನ ರಂಗ ವೇದಿಕೆ. ವೇಷ ಧರಿಸಿದವರೆಲ್ಲ ಪಾತ್ರಧಾರಿಗಳಲ್ಲ. ಈ ಕ್ಷೇತ್ರದಲ್ಲಿ ಕಲಿಯಲು ಸಾಕಷ್ಟು ವಿಚಾರಗಳಿವೆ. ಕಲೆಯ ಅಂತಃಸತ್ವವನ್ನು ಅರಿತವನು ಮಾತ್ರ ಸಾಧಕ ಕಲಾವಿದ. ಅಂತಹ ಸಾಧಕರಲ್ಲಿ ಶಿವಾನಂದ ಶೆಟ್ಟಿ ಪೆರ್ಲ ಕೂಡ ಒಬ್ಬರು.ದಿ/ಬಾಲಕೃಷ್ಣ ಶೆಟ್ಟಿ ಮತ್ತು ಜಯ ದಂಪತಿಯ ಮಗನಾಗಿ 18/5/1998 ರಂದು ಕೇರಳದ ಪೆರ್ಲ ಸಮೀಪದ ಬಜಕೂಡ್ಲುವಿನಲ್ಲಿ ಜನಿಸಿದರು.ಬಾಲ್ಯದಲ್ಲಿಯೇ ಗೆಜ್ಜೆ ಕಟ್ಟಿ ಕುಣಿಯುವ,ಮಾತುಗಾರಿಕೆ, ಅರ್ಥಗಾರಿಕೆಯಲ್ಲಿ ಅಪಾರ ಆಸಕ್ತಿಯಿದ್ದ ಇವರು 4ನೇ ತರಗತಿಯಲ್ಲಿರುವಾಗ ಶ್ರೀ ಸತ್ಯನಾರಾಯಣ ಶಾಲೆ ಪೆರ್ಲದ “ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ಗುರುಗಳಾದ ಸಬ್ಬಣಕೋಡಿ ರಾಮ ಭಟ್ ರಲ್ಲಿ ತರಬೇತಿ ಪಡೆದರು.

7ನೇ ತರಗತಿಯಲ್ಲಿರುವಾಗ ಮೊದಲ ಬಾರಿ “ಕಟೀಲು ಮೇಳದ ಒಂದನೇ ಮೇಳ “ದಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿದರು. ಮುಂದೆ “ಎಡನೀರು ಮೇಳದಲ್ಲಿ ಅವಕಾಶ ಪಡೆದು ಯಕ್ಷಗಾನ ಕಲಾವಿದರಾಗಿ ಮೇಳೈಸಿದರು. “ಕಲಾವಿದನಿಗೆ ತನ್ನ ಕಲೆಯೇ ಬದುಕು ಮತ್ತು ಜೀವಾಳ.” ಎಂಬ ಮಾತು ನಿಜವೆನಿಸಿದ್ದು ಯಕ್ಷಗಾನಕ್ಕಾಗಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ “ಕಟೀಲು ಮೇಳ “ದಲ್ಲಿ ಕಲಾವಿದನಾಗಿ ದುಡಿಯತೊಡಗಿದ ಶಿವಾನಂದ ಶೆಟ್ರನ್ನು ನೋಡಿಯೇ, ಮುಖವೆಲ್ಲಾ ಬಣ್ಣ ಬಳಿದು ಭಾರವಾದ ವೇಷ ತೊಟ್ಟು, ಬಾಯ್ತುಂಬ ಪುರಾತನ ಕಥೆಯನ್ನಾಡಿ, ಭೂಮಿ ಅದಿರುವ ನಟನೆ ಮಾಡಿ, ಮುಖಭವನದಲ್ಲೇ ಕಥೆಯನ್ನು ಹೇಳುವ ಯಕ್ಷ ಕಲಾವಿದ ಇವರು.

ಪ್ರಸ್ತುತ “ಕಟೀಲು 5ನೇ ಮೇಳದಲ್ಲಿ ಮೇರು ಕಲಾವಿದನಾಗಿ ಹೊರಹೊಮ್ಮತ್ತಿರುವ ಸಾಧಕ “ಶಿವಾನಂದ ಶೆಟ್ಟಿ ಪೆರ್ಲ”ರವರು ಬಹಳಷ್ಟು ಪಾತ್ರಗಳನ್ನು ನಿರ್ವಹಿಸುತ್ತ ತನ್ನ ಕಲೆಯ ರಂಗನ್ನು ಬಾನೆತ್ತರಕ್ಕೆ ಪಸರಿಸುತ್ತಿದ್ದಾರೆ. ದೇವಿಮಹಾತ್ಮೆಯ ಚಂಡ -ಮುಂಡನಾಗಿ ,ಗಿರಿಜಾ ಕಲ್ಯಾಣದಲ್ಲಿ ಮನ್ಮಥ,ಷಣ್ಮುಖ, ಸೀತಾಕಲ್ಯಾಣದ ರಾಮ,ಪ್ರಹ್ಲಾದ ಚರಿತ್ರೆಯ ಪ್ರಹ್ಲಾದ,ಇಂದ್ರಜಿತು ಕಾಳಗದ ರಾಮ,ಕಂಸವಧೆಯ ಕೃಷ್ಣ ಹೀಗೆ ಪ್ರಮುಖ ಪಾತ್ರಗಳಲ್ಲಿ ನಟಿಸಿ ಕರಾವಳಿಯ ಯಕ್ಷವೈಭವದ ಕಾಂತಿಯನ್ನು ಹೆಚ್ಚಿಸುತ್ತಿರುವ ಮೇರುಕಲಾವಿದ ಇವರು.

ಯಕ್ಷಗಾನದಲ್ಲಿ ತನ್ನದೇ ಶಿಸ್ತು,ಸಂಪ್ರದಾಯವನ್ನು ರೂಡಿಸಿಕೊಂಡ ಕಲಾವಿದ ಇವರು. ಕುಣಿತದ ವಿಭಾಗವನ್ನು ದ್ವಿತೀಯವಾಗಿಟ್ಟುಕೊಂಡು ಖಳಪಾತ್ರದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಅಭಿನಯವನ್ನು ಅಭಿವ್ಯಕ್ತಿಸಿ, ಅಚ್ಚುಕಟ್ಟಾದ ವೇಷಾಲಂಕಾರ, ಅದಕೊಪ್ಪುವ ಗಾಂಭೀರ್ಯತೆ, ಸಾಂಪ್ರದಾಯಿಕ ಚೌಕಟ್ಟಿಗೆ ಚ್ಯುತಿ ಬಾರದಂತೆ, ಅರ್ಥಗರ್ಭಿತ ಮತ್ತು ತೂಕಬದ್ಧ ಮಾತಿನೊಂದಿಗೆ, ಇತಿಮಿತಿಯೊಳಗೆ ಕಥೆಯ ಸಾರವನ್ನು ಪಾತ್ರದ ಮೂಲಕ ಸಚೇತಗೊಳಿಸುವ ಚಾಕಚಕ್ಯತೆ ಇರುವ ಪ್ರಬುದ್ಧ ಕಲಾವಿದರು ನಮ್ಮ ಶಿವಾನಂದ್ ಶೆಟ್ಟಿ ಪೆರ್ಲ.

ಇವಿಷ್ಟು ಇವರ ಸಾಧನೆಯ ಹಾದಿಯಾದರೆ,ಈ ಕಿರುದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ಸರಿಸಿ ಯಶಸ್ಸಿನ ಕಿರಣವಾಗಲು ಪ್ರೋತ್ಸಾಹವಿತ್ತ ಹೃದಯಗಳನ್ನು ಸ್ಮರಿಸಲೇಬೇಕು. ಕಡುಬಡತನದಲ್ಲಿ ಬೆಳೆದ ಶಿವಾನಂದ್ ಹಾಗೂ ಅವರ ಇಬ್ಬರು ತಮ್ಮಂದಿರನ್ನು ಸಾಕಿ ಸಲಹಿದ ದೇವತೆ ಅವರ ಚಿಕ್ಕಮ್ಮ ಮತ್ತು ಅಜ್ಜಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಹಾಗೆಯೇ ತಾನೊಂದು ದೊಡ್ಡ ಕಲಾವಿದನಾಗಬೇಕು ಎಂಬ ಆಶಯದಿಂದ ಬೆನ್ನೆಲುಬಾಗಿ ಪ್ರೋತ್ಸಾಹ ಇತ್ತವರು ಅನೇಕರು.

ಗುರುಗಳಾದ ಸಬ್ಬಣಕೋಡಿ ರಾಮ ಭಟ್ಟರ ಪೂರ್ಣ ಆಶೀರ್ವಾದ,ಕಟೀಲು ಮೇಳದ ಮೇರು ಕಲಾವಿದ ಸುಣ್ಣoಬಲ ವಿಶ್ವೇಶ್ವರ ಭಟ್,ಶಾಲೆಯಲ್ಲಿ ಸತೀಶ್ ಪುಣಿಚಿತ್ತಾಯ ಮಾರ್ಗದರ್ಶನ, ಹರಿನಾರಾಯಣ ಭಟ್, ಬಾಯಾರು ಮೋಹನ ಶೆಟ್ಟಿ, ಸಂಜೀವ ಶಿರಂಕಲ್ಲು, ರಮೇಶ್ ಭಟ್ ಬಾಯಾರು, ಭಾಗವತರಾದ ಗೋವಿಂದ ಭಟ್, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರೀ, ಸುಕುಮಾರ ಬಲ್ಲಾಳ ಮದ್ದಳೆಗಾರರು, ಮಹೇಶ್ ಕುಮಾರ್ ಸಾಣೂರು, ರವಿ ಮುಂಡಾಜೆ, ಆನ0ದ ಕೊಕ್ಕಡ,ರವಿರಾಜ್ ಭಟ್ ಪನೇಲ ಹೀಗೆ ಅನೇಕರು ಇವರ ಮಾತುಗಾರಿಕೆಯ ಶೈಲಿಯನ್ನು ಹಂತ ಹಂತವಾಗಿ ಬೆಳೆಸಿದರು.

ಮಳೆಗಾಲದ ಯಕ್ಷಗಾನ ಕ್ಯಾಂಪ್ ಸಮಯದಲ್ಲಿ ಶ್ರೀಧರ್ ಭಂಡಾರಿ ಪುತ್ತೂರು,ಚಂದ್ರಶೇಖರ್ ಧರ್ಮಸ್ಥಳ, ಪೆರ್ಲ ಜಗನ್ನಾಥ ಶೆಟ್ಟಿಯವರ ಪ್ರೋತ್ಸಾಹವಿತ್ತು.ಹಾಗೆಯೇ ಪ್ರಜ್ವಲ್ ಕುಮಾರ್ ಗುರುವಾಯನಕೆರೆ,ದಿವಾಕರ್ ರೈ ಸಂಪಾಜೆ,ವಾಮನ ಕುಮಾರ ವೇಣೂರುರವರ ಸಹಕಾರವನ್ನು ಸದಾ ಸ್ಮರಿಸಿಕೊಳ್ಳುತ್ತಾರೆ ಶಿವಾನಂದ್. ಕಟೀಲು ಮೇಳದ ಯಜಮಾನರಾದ ದೇವಿಪ್ರಸಾದ್ ಶೆಟ್ಟಿ ಅವರ ಪ್ರೋತ್ಸಾಹ ಶ್ಲಾಘನೀಯ.

“ಹಗಲು ಸಾಮಾನ್ಯ ಜನರಂತೆ ಕಷ್ಟ ಸುಖಗಳನ್ನು ಪಾಲುಪಡೆದು ಬದುಕಿ,ರಾತ್ರಿ ಯಕ್ಷರಾಗಿ ಯಕ್ಷಲೋಕದಲ್ಲಿ ಸಂಚರಿಸುವ ಯಕ್ಷ “ಶಿವಾನಂದ್ ರ ಸಾಧನೆಯನ್ನು ಮೆಚ್ಚಿ ಕಾಮಜಾಲು ಕುಟುಂಬಸ್ಥರು ಸನ್ಮಾನ ಮಾಡಿ ಗೌರವದ ಮಳೆ ಹರಿಸಿದರು. ವೇದಮೂರ್ತಿ ಹರ್ಷಭಟ್ ಮಾತನಾಡಿ ಸ್ವಂತ ಕುಟುಂಬಸ್ಥರು ತಮ್ಮದೇ ಒಬ್ಬ ಬಂದುವನ್ನು ಗುರುತಿಸಿ ಸನ್ಮಾನಿಸೋದು ಕಲಾವಿದನಿಗೆ ಸಂದ ದೊಡ್ಡ ಗೌರವ, ಮುಂದಿನ ದಿನಗಳಲ್ಲಿ ಯಶಸ್ಸಿನ ನಕ್ಷತ್ರವಾಗಿ ಹೊರಹೊಮ್ಮಲಿ ಎಂದು ಹರಸಿದರು. ಬಹರೈನ್ ಬಂಟರ ಸಂಘದ ಅಧ್ಯಕ್ಷರಾದ ಮೋಹನ್ ದಾಸ್ ರೈ ಎರುಂಬು,ಅವರು ಕಲಾವಿದನ ಪರಿಚಯ ಮತ್ತು ಗುಣಗಾನ ಮಾಡಿದರು.ಚಿಪ್ಪಾರು ಗುತ್ತು ಆನಂದ ಶೆಟ್ಟಿಯವರು (ತಾಳಿಪಡ್ಪು) ಮಾತನಾಡಿ,ಉಜ್ವಲ ಭವಿಷ್ಯವನ್ನು ಯಕ್ಷಕ್ಷೇತ್ರದಲ್ಲಿ ಬೆಳಗಲು ಶಿವಾನಂದ್ ನ ಕಠಿಣ ಪರಿಶ್ರಮ ಮತ್ತು ಶ್ರದ್ದೆಯೇ ಕಾರಣ ಎಂದರು.

ಹಾಗೆಯೇ, ಸರ್ವಿಸ್ ಕೋ ಆಪರೇಟಿವ್ ಸೊಸೈಟಿ ಮಿಯಪದವು ಇದರ ಅಧ್ಯಕ್ಷರಾದ ಹರೀಶ್ ಶೆಟ್ಟಿ ದರ್ಬೆ,ಕೋಟಿ ಚೆನ್ನಯ ಧಾರಾವಾಹಿಯ ಕೋಟಿ ಪಾತ್ರದಾರಿ ರಾಜಶೇಖರ್ ಶೆಟ್ಟಿ ತಾಳಿಪಡ್ಪು ,ಕಾಮಜಾಲು ಕುಟುಂಬದ ಮಧುಸೂದನ್ ರೈ ಎರುಂಬು,,ಬಾಲಕೃಷ್ಣ ಶೆಟ್ಟಿ ಪೆರುವಾಯಿ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಕರಾವಳಿಯ ಕಂಪನು ಕೊಂಡಾಡುವ ಕಲೆ,ಪೌರಾಣಿಕ ಪಾತ್ರದಿ ಪರಿತತ್ವವ ಪರಿಚಯಿಸುವ ಬಗೆ,ಮಾತಿನ ಶೈಲಿ ನಾಟ್ಯದ ವೈಭವ, ಕಲಾರಸಿಕನ ಕೆರಳಿಸುವ ಕಲೆ, ಇದುವೇ ಕಲಾಭಿಮಾನಕ್ಕೆ ಸಿಕ್ಕ ಉಡುಗೊರೆ.

ಹುಮ್ಮಸ್ಸಿನ ಹೊಸ್ತಿಲಲ್ಲಿ ಸರಿ ದಾರಿ ಅರಸಿ ಬಂದ ಅದೆಷ್ಟೋ ಕಲಾವಿದರು ಕೊರೋನ ಸಂಕಷ್ಟಕ್ಕೆ ಸಿಲುಕಿ ಯಕ್ಷಗಾನ ಮಾಡಲಾರದೆ ಬಹಳ ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಕಲೆಯನ್ನೇ ನಂಬಿ ಬದುಕುತ್ತಿದ್ದ ಇತ್ತೀಚಿನ ಅದೆಷ್ಟೋ ಜೀವಗಳು ಕುಟುಂಬದ ಜವಾಬ್ದಾರಿ ಹೊರಲಾರದೆ ಒದ್ದಾಡುತ್ತಿದ್ದಾರೆ. ಕಲಾವಿದರ ಬದುಕಿಗೆ ಆಸರೆಯಾಗಲು ಹಲವಾರು ಸಂಘ ಸಂಸ್ಥೆಗಳು ಸಹಾಯದ ಗೌರವ ನೀಡಬೇಕಿದೆ. ನಮ್ಮನ್ನು ರಂಜಿಸುತ್ತಾ ನಮ್ಮ ಮನರಂಜನೆಯನ್ನೇ ತಮ್ಮ ಸಂತಸವೆ0ದು ಭಾವಿಸಿ ಕಲೆಯ ರಂಗನ್ನು ಪಸರಿಸುವ ಹೃದಯಗಳಿಗೆ ಭರವಸೆಯ ಜೊತೆಗೆ ಧನಸಹಾಯದ ಅಗತ್ಯವೂ ಇದೆ.ಅಂತಹ ಕುಟುಂಬಗಳನ್ನು ಗುರುತಿಸಿ ಪರಿಹಾರ ನೀಡುವ ಕಾರ್ಯವನ್ನು ಸರ್ಕಾರ,ಸೇವಾ ಸಂಸ್ಥೆ ಹಾಗೂ ಕಣ್ಣೀರು ಒರೆಸಲು ಯೋಗ್ಯವಾದ ಕೈಗಳು ಸಹಕರಿಸುವಂತೆ ವಿನಂತಿಸುತ್ತೇನೆ.

ಶಿವಾನ0ದ್ ಶೆಟ್ಟಿ ಪೆರ್ಲರವರ ಯಕ್ಷಸೇವೆಗೆ ಗೌರವದ ಗರಿ ಅರಳಲಿ.ಸಾವಿರಾರು ಅಭಿಮಾನಿಗಳು ಬೆಂಬಲ ನೀಡಿ ಯಶಸ್ಸಿನ ಹೆಮ್ಮರವಾಗಲು ಸಹಕರಿಸಲಿ.ನಂಬಿದ ತಾಯಿ ಭ್ರಮರಾಂಬಿಕೆ ಅನುಕ್ಷಣವೂ ರಕ್ಷಾಕವಚವಾಗಿ ಕಾಪಾಡಲಿ.

ಚೈತ್ರ ಕಬ್ಬಿನಾಲೆ✍️✍️

- Advertisement -

Related news

error: Content is protected !!