ಮಂಗಳೂರು: ಗೋಸಾಗಾಟ ಮಾಡುವ ವ್ಯಾಪಾರಿಗಳಿಗೆ ಹಲ್ಲೆ ಮಾಡುವವರ, ದರೋಡೆ ಮಾಡುವ ಖದೀಮರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ನಿನ್ನೆ ಖಡಕ್ ವಾರ್ನಿಂಗ್ ನೀಡಿದ್ದರು. ಇದನ್ನು ಸಹಿಸದ ಕೆಲ ಕಿಡಿಗೇಡಿಗಳು ವಾಟ್ಸ್ ಆಪ್ ಗ್ರೂಪಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಒಡ್ಡಿದ್ದಾರೆ. ಆರೋಪಿಗಳನ್ನು ತಕ್ಷಣವೇ ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಕದಡುವ ಕಿಡಿಗೇಡಿಗಳಿಗೆ ಪೊಲೀಸ್ ಇಲಾಖೆ ಸೂಕ್ತ ಸಂದೇಶ ರವಾನಿಸಬೇಕು ಎಂಬ ಆಗ್ರಹ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
“ರಾಮ್ ಸೇನಾ” ಎಂಬ ವಾಟ್ಸಪ್ ಗ್ರೂಪ್ ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಅವರಿಗೆ ತುಳು ಭಾಷೆಯಲ್ಲಿ “ಫಸ್ಟ್ ಮೊಲೆನ್ ಕಡ್ತ್ ಕೆರೊಡು” (ಮೊದಲು ಇವಳನ್ನು ಕಡಿದು ಕೊಲೆಗೈಯಬೇಕು) ಎಂದು ಪೋಸ್ಟ್ ಗೆ ಕಾಮೆಂಟ್ ಬರೆಯುವ ಮೂಲಕ ಕೊಲೆ ಬೆದರಿಕೆ ಒಡ್ಡಲಾಗಿದೆ. ಇದೇ ಗ್ರೂಪಿನ ಇನ್ನಿತರ ಸದಸ್ಯರು ಕೂಡ ಇದೇ ತರ ಬೆದರಿಕೆ ಹಾಕಿದ್ದಲ್ಲದೆ ಇದೆಲ್ಲವನ್ನು ಅಡ್ಮಿನ್ ನೋಡಿಯೂ ಸುಮ್ಮನಿದ್ದಾನೆ ಎನ್ನಲಾಗಿದೆ.
ಕಾಮೆಂಟ್ ಬರೆದಿರುವ ಮೊಬೈಲ್ ಸಂಖ್ಯೆ +919632188546 ಆಗಿದ್ದು ಕಿಡಿಗೇಡಿಯನ್ನು ಕೂಡಲೇ ಪೋಲಿಸರು ಪತ್ತೆ ಹಚ್ಚಿ ಜಿಲ್ಲಾಧಿಕಾರಿಯವರಿಗೆ ರಕ್ಷಣೆ ನೀಡುವ ಮೂಲಕ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿದೆ ಎಂದು ಪ್ರಜ್ಞಾವಂತ ನಾಗರಿಕರು ಒತ್ತಾಯಿಸಿದ್ದಾರೆ. ಇಂಥ ಕಿಡಿಗೇಡಿಗಳನ್ನು ಮತ್ತು ಬೆಂಬಲಿಸುವ ಗ್ರೂಪ್ ಅಡ್ಮಿನ್ ಗಳನ್ನು ಕಠಿಣ ಕಾಯ್ದೆಯಡಿ ತಕ್ಷಣವೇ ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವಂತಾಗಬೇಕು ಎನ್ನುವ ಮಾತುಗಳು ನಾಗರಿಕ ವಲಯದಲ್ಲಿ ಕೇಳಿಬಂದಿದೆ.