ಲಖನೌ: ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.ಉತ್ತರ ಪ್ರದೇಶ ಮಿರ್ಜಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆ ರಾತ್ರಿ ತಾನು ಅನುಭವಿಸಿದ ನರಕ ಯಾತನೆ ನೆನೆಸಿಕೊಂಡು ಯುವಕ ಕಣ್ಣೀರು ಹಾಕಿದ್ದಾನೆ.
ಸಿಕಂದರ್ ಪುರ್ ಗ್ರಾಮದಲ್ಲಿ ವಿದ್ಯುತ್ ಕಂಬ, ವೈರ್ ಅಳವಡಿಸುವ ಕಾಮಗಾರಿ ನಡೆಯುತ್ತಿತ್ತು. ಲವ್ಲೇಶ್ ಎಂಬ ವ್ಯಕ್ತಿ ಕೆಲಸ ಮಾಡಿದ ನಂತರ ಸಹ ಕಾರ್ಮಿಕರೊಂದಿಗೆ ಅಂಗನವಾಡಿ ಕೇಂದ್ರದಲ್ಲಿ ರಾತ್ರಿ ಮಲಗಿಕೊಂಡಿದ್ದ.
cobra snake enters young man jeans pant while sleeping man stand for 7 hours holding a pillar at mirzapur up @susantananda3 pic.twitter.com/6t1KsIHeTO
— Koushik Dutta (@MeMyselfkoushik) July 29, 2020
ಅನಿರೀಕ್ಷಿತವಾಗಿ ಸರ್ಪವೊಂದು ಆತನ ಪ್ಯಾಂಟಿನೊಳಗೆ ಸೇರಿಕೊಂಡಿತು. ಕೂಡಲೇ ಏನೂ ತೂರಿದೆ ಎಂದು ಎಚ್ಚರಗೊಂಡು ನೋಡಿದಾಗ ಹಾವು ಕಾಣಿಸಿದ್ದರಿಂದ ಭಯಗೊಂಡ ಯುವಕ ಸ್ವಲ್ಪವೂ ಕದಲದೆ ಕಂಬವೊಂದನ್ನು ಆಸರೆಯಾಗಿ ಹಿಡಿದುಕೊಂಡು ರಾತ್ರಿಯಿಡೀ ನಿಂತುಕೊಂಡು ಸಂಕಷ್ಟ ಅನುಭವಿಸಿದ.
ವಿಷಯ ತಿಳಿದು ಸ್ಥಳೀಯರು ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಾವನ್ನು ಹೊರೆಗೆ ತೆಗೆಸಿದ್ದಾರೆ. ಮುನ್ನೆಚ್ಚರಿಕೆಯ ಕ್ರಮವಾಗಿ ಅಂಬುಲೆನ್ಸ್ ಕೂಡಾ ಸ್ಥಳಕ್ಕೆ ಕರೆಸಿದ್ದರು. ಆದರೆ, ಅದೃಷ್ಟವಶಾತ್ ಹಾವು ಯುವಕನನ್ನು ಕಚ್ಚಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾನೆ.