





ಲಂಡನ್: ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇಂದು(ಜೂನ್ 22) ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲೇಬರ್ ಪಕ್ಷದೊಳಗೆ ಅವರ ನಾಯಕತ್ವದ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಸ್ಫೋಟಗೊಂಡಿತ್ತು. ಪಕ್ಷದ ಒಳಗಿನ ತೀವ್ರ ರಾಜಕೀಯ ಒತ್ತಡದಿಂದಾಗಿ ಅವರು ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ.
ರಾಜೀನಾಮೆ ಭಾಷಣದಲ್ಲಿ, ನನ್ನ ಸಂಸದೀಯ ಪಕ್ಷದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಲು ನಾನೇ ಸರಿಯಾದ ವ್ಯಕ್ತಿಯೇ ಎಂಬುದು ಅವರ ಪ್ರಶ್ನೆಯಾಗಿತ್ತು. ನನ್ನ ಪಕ್ಷದ ನಿರ್ಧಾರವನ್ನು ನಾನು ಗೌರವದಿಂದ ಸ್ವೀಕರಿಸುತ್ತೇನೆ.ನಾನು ಲೇಬರ್ ಪಕ್ಷದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪ್ರಕಟಿಸಿದರು.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಲೇಬರ್ ಪಕ್ಷವು ಭಾರಿ ಸೋಲನ್ನು ಅನುಭವಿಸಿತ್ತು. ಪಕ್ಷದ ಸಾಂಪ್ರದಾಯಿಕ ಭದ್ರಕೋಟೆಗಳಲ್ಲೇ ಮತದಾರರು ಲೇಬರ್ ಪಕ್ಷವನ್ನು ಕೈಬಿಟ್ಟಿದ್ದರಿಂದ, ಸ್ಟಾರ್ಮರ್ ನಾಯಕತ್ವದ ಮೇಲೆ ಸಂಸದರಿಗೆ ನಂಬಿಕೆ ಕಡಿಮೆಯಾಗಿತ್ತು.
ವಲಸೆ ನೀತಿ, ಇಂಧನ ಸಮಸ್ಯೆಗಳು ಮತ್ತು ಸರಣಿ ಹಗರಣಗಳಿಂದಾಗಿ ಸಾರ್ವಜನಿಕರಲ್ಲಿ ಇವರ ಮೇಲಿನ ವಿಶ್ವಾಸ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಕೀರ್ ಸ್ಟಾರ್ಮರ್ ಅವರ ಪ್ರಮುಖ ರಾಜಕೀಯ ಎದುರಾಳಿ ಆಂಡಿ ಬರ್ನ್‌ಹ್ಯಾಮ್ ಅವರು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸಿದ್ದರು. ಇದು ಸ್ಟಾರ್ಮರ್ ನಾಯಕತ್ವಕ್ಕೆ ನೇರ ಸವಾಲಾಗಿ ಪರಿಣಮಿಸಿತ್ತು.
ಕೀರ್ ಸ್ಟಾರ್ಮರ್ ಅವರು 2024 ರ ಜುಲೈನಲ್ಲಿ ಭಾರೀ ಬಹುಮತದೊಂದಿಗೆ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಕೇವಲ ಎರಡು ವರ್ಷಗಳಲ್ಲೇ ಅವರು ತಮ್ಮದೇ ಪಕ್ಷದ ನಾಯಕರ ಬೆಂಬಲ ಕಳೆದುಕೊಂಡು ಅಧಿಕಾರ ಬಿಡಬೇಕಾಗಿ ಬಂದಿದೆ.
ಜುಲೈ 4, 2024 ರಂದು ನಡೆದ ಬ್ರಿಟನ್ ಸಾರ್ವತ್ರಿಕ ಚುನಾವಣೆಯಲ್ಲಿ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಭಾರಿ ಬಹುಮತದೊಂದಿಗೆ ಐತಿಹಾಸಿಕ ಜಯ ದಾಖಲಿಸಿತು. ಆ ಚುನಾವಣೆಯಲ್ಲಿ ಒಟ್ಟು 650 ಸೀಟುಗಳ ಪೈಕಿ ಲೇಬರ್ ಪಕ್ಷವು 410 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಚುನಾವಣಾ ಫಲಿತಾಂಶ ಬಂದ ಮರುದಿನ ಅಂದರೆ ಜುಲೈ 5 ರಂದು ಅಧಿಕಾರ ಸ್ವೀಕರಿಸಿದ್ದರು ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.








