
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸುವ ಬಗ್ಗೆ ದಿಲ್ಲಿ ನಾಯಕರಲ್ಲಿ ಒತ್ತಾಯ ಮಾಡಿರುವ ಆಡಿಯೋ ಒಂದು ವೈರಲ್ ಆಗುತ್ತಿದೆ. ಇದು ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರದ್ದು ಎನ್ನಲಾಗಿದೆ.
ಪ್ರದೀಪ್ ಎಂಬವರ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ನಡೆಸಿದ ಸಂಭಾಷಣೆ ಇದಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ವೈರಲ್ ಆದ ಆಡಿಯೋದಲ್ಲಿ…….?
ಸದಾನಂದ ಗೌಡರ ಧ್ವನಿಯನ್ನೇ ಹೋಲುವ ಈ ಆಡಿಯೋ ಇದೀಗ ವೈರಲ್ ಆಗುತ್ತಿದ್ದು, ಆಡಿಯೋದಲ್ಲಿ “ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ವರೆಗೂ ವಿಜಯೇಂದ್ರ ಮುಂದುವರೆಯಲು ಬಿಡಿ, ಬಳಿಕ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿ. ಈಗಲೇ ತೆಗೆದು ಹಾಕಿದರೆ ಬಿಜೆಪಿ ಮತ್ತೆ ಲಿಂಗಾಯತ ವಿರೋಧಿ ಅಂತ ಟೀಕೆಗೆ ಗುರಿ ಆಗುವ ಅಪಾಯ ಇದೆ. ಇದು ಪಕ್ಷಕ್ಕೆ ಡ್ಯಾಮೇಜ್ ಆಗಬಹುದು. ಹಾಗಾಗಿ ಮುಂದಿನ ಅಕ್ಟೋಬರ್ ವರೆಗೂ ಕಾದು ವಿಜಯೇಂದ್ರ ಅವರನ್ನು ಪದವಿಯಿಂದ ತೆಗೆಯುವಂತೆ” ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಈ ವೈರಲ್ ಆಡಿಯೋ ಪ್ರತಿಕ್ರಿಯೆ ನೀಡಿರುವ ಡಿ.ವಿ.ಸದಾನಂದ ಗೌಡ, “ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ” ಎಂದು ತಿಳಿಸಿದ್ದಾರೆ.








