ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳು ಸೇರಿದಂತೆ ವಿಟ್ಲದ ನಾಲ್ವರು ದರೋಡೆಯಲ್ಲಿ ಶಾಮೀಲು…!
ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಅನುಷಾ ಮಾರ್ಕೇಟಿಂಗ್ ಏಜೆನ್ಸಿ ಹೆಸರಿನ ಅಂಗಡಿಯಲ್ಲಿ ನೇಮರಾಜ್.ಕೆ.ಎಂ ಎಂಬುವವರು ವ್ಯಾಪಾರ ಮುಗಿಸಿಕೊಂಡು ಜುಲೈ 29ರಂದು ರಾತ್ರಿ ಸುಮಾರು 8.45 ಗಂಟೆಗೆ ತನ್ನ ಪತ್ನಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿರುವ ಸಂದರ್ಭ ಅಪರಿಚಿತ ವ್ಯಕ್ತಿಗಳು ಕಾರು ಮತ್ತು ಬೈಕಿನಲ್ಲಿ ಬಂದು ಅಡ್ಡಗಟ್ಟಿ ಮುಖಕ್ಕೆ ಕಾರದ ಪುಡಿ ಎರಚಿ ಸ್ಕೂಟರ್‌ನಿಂದ ತಳ್ಳಿ ಬೀಳಿಸಿ ನೇಮರಾಜ್ ರವರ ಪತ್ನಿಗೆ ಹಲ್ಲೆ ಮಾಡಿ ನಗದು ರೂ. 6,18,000/- ಹಾಗೂ 03 ಮೊಬೈಲ್ ಪೋನ್‌ಗಳಿದ್ದ ಬ್ಯಾಗ್‌ನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ: 310(2) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಘಟನೆ ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರು ಆಗಮಿಸಿ ಅಪರಾಧ ಪತ್ತೆ ತಜ್ಞರ ತಂಡ ಭೇಟಿ ನೀಡಿ ಅಪರಾಧ ಕೃತ್ಯದ ಕುರಿತು ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದು, ಆರ್.ವಿ. ಗಂಗಾಧರಪ್ಪ, ಡಿಎಸ್‌ಪಿ, ಸೋಮವಾರಪೇಟೆ ಉಪವಿಭಾಗ ರವರ ಉಸ್ತುವಾರಿಯಲ್ಲಿ ಮುದ್ದು ಮಾದೇವ, ಪಿಐ, ಸೋಮವಾರಪೇಟೆ ಪೊಲೀಸ್ ಠಾಣೆ, ಗೋಪಾಲ, ಪಿಎಸ್‌ಐ, ಸೋಮವಾರಪೇಟೆ ಪೊಲೀಸ್ ಠಾಣೆ ಸೋಮವಾರಪೇಟೆ ಉಪವಿಭಾಗದ ಅಪರಾಧ ತನಿಖೆ/ಪತ್ತೆ ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ & ತಾಂತ್ರಿಕ ಸಿಬ್ಬಂದಿಗಳು., ಅಧಿಕಾರಿ/ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ದರೋಡೆ ಪ್ರಕರಣದ 07 ಜನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ವಶಕ್ಕೆ ಪಡೆದ ಪ್ರಮುಖ ಆರೋಪಿಗಳಲ್ಲಿ ಇಬ್ಬರು ಕರೋಪಾಡಿ ಜಲೀಲ್ ಕೊಲೆ ಪ್ರಕರಣದ ಆರೋಪಿಗಳಾದ ರೋಶನ್ ಮತ್ತು ಪಿಲಿಂಗುರಿ ಸತೀಶ ಹಾಗೂ ಬಾಲೆ ಗಣೇಶ, ವೀರಕಂಭದ ಕುಸುಮಾಕರ ಎಂದು ಗುರುತಿಸಲಾಗಿದೆ ಮತ್ತು ಇನ್ನುಳಿದ ಆರೋಪಿಗಳನ್ನು ಸೂರ್ಯಪ್ರಸಾದ್ ಬಿ.ಎ. @ ಭಟ್ಟ, ಶಿವಕೇರಿ, ವಿರಾಜಪೇಟೆ ಟೌನ್. ವಿನೋದ್ ಕುಮಾರ್ ಹೆಚ್.ಪಿ,ವೆಂಕಟೇಶ್ವರ ಬ್ಲಾಕ್, ಸೋಮವಾರಪೇಟೆ ಟೌನ್.,ಮೋಹನ್ ಕುಮಾರ್ ಬಿ, ಹೆಬ್ಬಾಲೆ ಗ್ರಾಮ, ಕುಶಾಲನಗರ ಎಂದು ಗುರುತಿಸಲಾಗಿದೆ
ಈ ಏಳು ಮಂದಿ ಆರೋಪಿಗಳನ್ನು ವಿಶೇಷ ತನಿಖಾ ತಂಡವು ದಿನಾಂಕ: 06-08-2024 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಹಾಗೂ ಅಪರಾಧ ಕೃತ್ಯಕ್ಕೆ ಬಳಸಿದ 02 ವಾಹನಗಳು (ಸ್ಯಾಂಟ್ರೋ & ಮಾರುತಿ ಸ್ವಿಫ್ಟ್), 09 ಮೋಬೈಲ್ ಗಳು ಮತ್ತು ರೂ. 3,02,000/- ಲಕ್ಷಗಳ ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದ ರೋಶನ್, ಸತೀಶ್ ರೈ, ಗಣೇಶ, ಕುಸುಮಕರ ಎಂಬ ಆರೋಪಿಗಳು ಅಂತರ್ ಜಿಲ್ಲಾ ದರೋಡೆ ತಂಡವಾಗಿರುತ್ತದೆ. ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಲೆ, ಕೊಲೆ ಪ್ರಯತ್ನ, ಕಿಡ್ನಾಪ್ ಮುಂತಾದ ಹಲವು ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದು ಹಾಗೂ 2022 ನೇ ಸಾಲಿನಲ್ಲಿ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.