



ನೇರಳಕಟ್ಟೆ: ಶ್ರೀ ಗಣೇಶ ಸಭಾಭವನ, ಶಾಖೆ ನೇರಳಕಟ್ಟೆಯಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವತಿಯಿಂದ ವಿಶೇಷ ಅಮೃತ ಫಲಹಾರ ತರಗತಿಯನ್ನು ಭಾನುವಾರ(ಆ. 25) ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಕಾಶ್ ನಾಯಕ್ ರವರು ಹಸಿ ತರಕಾರಿಗಳಾದ ಕ್ಯಾರೆಟ್, ಬೀಟ್ರೂಟ್, ಕುಂಬಳಕಾಯಿ, ಹಾಗಲಕಾಯಿ, ಮೂಲಂಗಿ ಮತ್ತು ಮುಳ್ಳುಸೌತೆ ಇವುಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು. ಜೊತೆಗೆ ವೀಳ್ಯದೆಲೆ, ಏಲಕ್ಕಿ, ಬೆಲ್ಲ ಹಾಗೂ ತೆಂಗಿನಕಾಯಿ ಹಾಲಿನ ವಿಶೇಷ ಪಾನೀಯದ ಮಹತ್ವವನ್ನು ವಿವರಿಸಿ, ಎಲ್ಲಾ ಯೋಗ ಬಂಧುಗಳಿಗೆ ಹಾಗೂ ಕುಟುಂಬದವರಿಗೆ ವಿತರಿಸಲಾಯಿತು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗದ ಜೊತೆಗೆ ಸಾತ್ವಿಕ ಆಹಾರ ಪದ್ಧತಿ ಹಾಗೂ 4 ಭಾನುವಾರಗಳ ಕಾಲ ಒಣ ಹಣ್ಣುಗಳು, ಮೊಳಕೆ ಕಾಳುಗಳು, ತಾಜಾ ಹಣ್ಣುಗಳ ಸೇವನೆಯ ಬಗ್ಗೆ ವಿಶೇಷ ತರಗತಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಯೋಗೀಶ್ ಪುತ್ತೂರು, ಕೀರ್ತಿ ವಿಟ್ಲ ಹಾಗೂ ಚಿತ್ತರಂಜನ್ ನೆಕ್ಕಿಲಾರು ಅವರು ವಿವಿಧ ಆಹಾರ ಪದಾರ್ಥಗಳ ಪೋಷಕಾಂಶಗಳು ಹಾಗೂ ಉಪಯೋಗಗಳನ್ನು ವಿವರವಾಗಿ ತಿಳಿಸಿಕೊಟ್ಟರು.
ಕಾರ್ಯಕ್ರಮವು ಭಜನೆ, ಅಮೃತವಚನ, ದಿನದ ಪಂಚಾಂಗ ಪಠಣದೊಂದಿಗೆ ಆರಂಭಗೊಂಡು, ಕೊನೆಯಲ್ಲಿ ಅನ್ನಪೂರ್ಣ ಮಂತ್ರದೊಂದಿಗೆ ಸಾಮೂಹಿಕ ಪ್ರಸಾದದ ವ್ಯವಸ್ಥೆ ಮಾಡಲಾಯಿತು.
ಮುಖ್ಯ ಶಿಕ್ಷಕರಾದ ಪ್ರಕಾಶ್ ಅಣ್ಣಡ್ಕರವರ ನಿರ್ದೇಶನದಲ್ಲಿ ಹಾಗೂ ಶಿಕ್ಷಕಿ ಶ್ರೀಮತಿ ವೃಂದಾ ಜೆ. ರೈ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 150 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು.








