ಬಂಟ್ವಾಳ: ಶಿಕ್ಷಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಹತ್ತನೇ ತರಗತಿ ವಿದ್ಯಾರ್ಥಿ ಕೌಶಿಕ್ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ 424 ಅಂಕ ಗಳಿಸುವ ಮೂಲಕ ಶೇ.68 ಅಂಕಗಳಿಸಿದ್ದಾನೆ.

ಈತನಿಗೆ ಹೆತ್ತವರಾದ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಸಿಹಿ ತಿನಿಸಿ ಸಂಭ್ರಮಿಸಿದರು. ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್ ಗೆ ಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಇದಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು. ಕೌಶಿಕ್ ತನ್ನ ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾನೆ.

