*ಬೆಂಗಳೂರು – ಜುಲೈ 8,: ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆ ಫಲಪ್ರದವಾಗಿದ್ದು, ಕೊರೋನ ಚಿಕಿತ್ಸೆಗೆ ಹೆಚ್ಚುವರಿ ಹಾಸಿಗೆಗಳನ್ನು ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಗೆ ಸೂಚಿಸಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಆನ್‌ಲೈನ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 6,000 ದಿಂದ 7,000 ಹಾಸಿಗೆಗಳನ್ನು ತಮ್ಮದೇ ಆದ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆಗಳಲ್ಲಿ ಮೀಸಲಿಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಮತ್ತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎಸ್.ಮಂಜುನಾಥ್ ಅವರು ಉಪಸ್ಥಿತರಿದ್ದರು.
ಪ್ರತಿಯೊಂದು ಖಾಸಗಿ ಆಸ್ಪತ್ರೆಗಳು ನರ್ಸಿಂಗ್ ಹೋಂಗಳಲ್ಲಿ ಲಭ್ಯವಿರುವ ಜನರಲ್ ಹಾಸಿಗೆಗಳು, ಐಸಿಯು ಹಾಸಿಗೆಗಳು ಮತ್ತು ವೆಂಟಿಲೇಟರ್ ಸೌಲಭ್ಯ ಕುರಿತಾದ ಕ್ಷಣಕ್ಷಣದ ಮಾಹಿತಿ ಪಡೆಯುವುದಕ್ಕಾಗಿ ಕೇಂದ್ರೀಕೃತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದ್ದು, ರಿಯಲ್ ಟೈಂ ಡಾಟಾ ಆಧಾರದ ಮೇಲೆ ಹಾಸಿಗೆಗಳನ್ನು ಹಂಚಿಕೆ ಮಾಡಲಾಗುವುದು. ಇದರಿಂದ ರೋಗಿಗಳು ಒಂದು ಅಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ ಎಂದು ಸಚಿವರು ತಿಳಿಸಿದರು.