
ಚೆನ್ನೈ: ಅನುಮತಿ ಇಲ್ಲದೇ ತಮ್ಮ ಹೆಸರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಕಾಲಿವುಡ್ ನಟ ವಿಜಯ್ ಅವರು ತಮ್ಮ ತಂದೆ-ತಾಯಿ ಸೇರಿದಂತೆ ಇತರೆ 11 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

ಕಳೆದ ವರ್ಷ ವಿಜಯ್ ಅವರ ತಂದೆ, ಖ್ಯಾತ ನಿರ್ದೇಶಕ ಚಂದ್ರಶೇಖರ್ ಅವರು ವಿಜಯ್ ಮಕ್ಕಳ್ ಹೆಸರಿನಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮಾಡಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ, ಖಜಾಂಚಿಯಾಗಿ ವಿಜಯ್ ಅವರ ತಂದೆ-ತಾಯಿ ಅವರೇ ಕಾರ್ಯನಿರ್ವಹಿಸಿದ್ದರು. ಆದರೆ ತನ್ನ ತಂದೆ ಸ್ಥಾಪಿಸಿದ ಪಕ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಿಜಯ್ ಈ ಹಿಂದೆಯೇ ಸ್ಪಷ್ಟಪಡಿಸಿದ್ದರು. ಆದರೂ ತಂದೆ-ತಾಯಿ ಮಗನ ಹೆಸರಿನಲ್ಲಿ ಪಕ್ಷವನ್ನು ಮುಂದುವರಿಸಿದ್ದರು. ಆದರೆ ಸದ್ಯ ತನ್ನ ಹೆಸರನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ವಿಜಯ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ವಿಜಯ್ ಅವರ ನಡೆ ತಮಿಳುನಾಡು ಸಿನಿರಂಗ, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ವಿಜಯ್ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದು, ಅನಗತ್ಯವಾಗಿ ವಿಜಯ್ ಅವರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ. ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ ವಿಜಯ್ ಹಾಗೂ ಧೋನಿ ಫೋಟೋಗಳನ್ನು ಪಕ್ಷದ ಬ್ಯಾನರ್ಗಳಲ್ಲಿ ಮುದ್ರಿಸಿ ರಾಜಕೀಯವಾಗಿ ಪ್ರಚಾರ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.











