Monday, August 10, 2026
spot_imgspot_img
spot_imgspot_img

ತೆರಿಗೆ ಸಂಗ್ರಹ ಗುರಿ ನೀಡಿದ ಸಿಎಂ ಸಿದ್ದರಾಮಯ್ಯ

- Advertisement -
- Advertisement -

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯು ನವೆಂಬರ್‌ ಅಂತ್ಯದವರೆಗೆ ನೀಡಿದ್ದ ತೆರಿಗೆ ಸಂಗ್ರಹದ ಗುರಿ (56,317 ಕೋಟಿ ರೂ.) ಸಾಧಿಸು ವಲ್ಲಿ ಹಿಂದೆ ಬಿದ್ದಿದ್ದು, ಇದುವರೆಗಿನ ಸಂಗ್ರಹ 53,103 ಕೋಟಿ ರೂ.ವನ್ನು ಸಂಗ್ರಹಿಸಲು ಮಾತ್ರವೇ ಶಕ್ತವಾಗಿದೆ. ಆದರೆ ಸರಕಾರಕ್ಕೆ ಆದಾಯ ತಂದುಕೊಡುವ ಉಳಿದ ಇಲಾಖೆ ಗಳು ನಿರೀಕ್ಷಿತ ಗುರಿ ತಲುಪಿವೆ.

ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರಕಾರದ ಎಲ್ಲ ಸಂಪನ್ಮೂಲ ಸಂಗ್ರಹ ಇಲಾಖೆಗಳು ಹಣಕಾಸು ವರ್ಷದ ಅಂತ್ಯಕ್ಕೆ ಕಡ್ಡಾಯವಾಗಿ ತಮ್ಮ ಗುರಿ ತಲುಪಬೇಕು ಎಂದು ಸೂಚನೆ ನೀಡಿದ್ದಾರೆ.

ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಸಂಪನ್ಮೂಲ ಸಂಗ್ರಹ ಇಲಾಖೆಗಳು ಇದುವರೆಗೆ ಉತ್ತಮ ಸಾಧನೆ ಮಾಡಿವೆ. ವಾಣಿಜ್ಯ ತೆರಿಗೆ ಇಲಾಖೆಯು ಶೇ. 100 ಬಜೆಟ್‌ ಗುರಿ ತಲುಪಲು ಅಗತ್ಯ ಕ್ರಮ ಕೈಗೊಳ್ಳಬೇಕು, ಅಬಕಾರಿ ಇಲಾಖೆಯ ಜಾಗೃತ ದಳ ಇನ್ನಷ್ಟು ಚುರುಕಾಗಬೇಕು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಕಾನೂನು ಬಾಹಿರ ನೋಂದಣಿಗೆ ಕಡಿವಾಣ ಹಾಕಬೇಕು, ಅರಣ್ಯ ಮತ್ತು ಗಣಿ ಇಲಾಖೆಯ ಮಧ್ಯೆ ಸಮನ್ವಯತೆ ಮೂಡಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಾಣಿಜ್ಯ ಇಲಾಖೆ ಶೇ. 94 ಸಾಧನೆ
ವಾಣಿಜ್ಯ ಇಲಾಖೆಗೆ ನವೆಂಬರ್‌ ಅಂತ್ಯದವರೆಗೆ ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿ 56,317 ಕೋಟಿ ರೂ. ನೀಡಲಾಗಿತ್ತು. ಇದುವರೆಗೆ 53,103 ಕೋಟಿ ರೂ ತೆರಿಗೆ ಸಂಗ್ರಹಿಸಿ ಶೇ. 94ರಷ್ಟು ಸಾಧನೆ ಮಾಡಿದೆ. ಮಲೆನಾಡು ಮತ್ತು ಮೈಸೂರು ವಿಭಾಗದಲ್ಲಿ ತೆರಿಗೆ ಸಂಗ್ರಹ ನಿಗದಿತ ಗುರಿಗಿಂತ ಕಡಿಮೆಯಿದ್ದು ಎಲ್ಲ ವಿಭಾಗಗಳು ಮುಂದಿನ ನಾಲ್ಕು ತಿಂಗಳಲ್ಲಿ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು ಎಂದು ಸಿಎಂ ಹೇಳಿದ್ದಾರೆ.

- Advertisement -

Related news

error: Content is protected !!