


ತೆಲಂಗಾಣ: ಇಲ್ಲಿನ ನಾಗರ್ಕರ್ನೂಲ್‌ನಲ್ಲಿ ಪರೀಕ್ಷೆ ಬರೆಯಲು ಶಾಲೆಗೆ ಬಂದಿದ್ದ 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾದಾಗ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಈ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾಳೆ. ನಂತರ ಆಕೆಯ ತಾಯಿ ಅವಳನ್ನು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಈ ವೇಳೆ ವೈದ್ಯರು ಸ್ಕ್ಯಾನ್ ಮಾಡಿಸಲು ಸೂಚಿಸಿದ್ದರು. ಸ್ಕ್ಯಾನಿಂಗ್ ಕೇಂದ್ರದಲ್ಲಿ ಕಾಯುತ್ತಿದ್ದಾಗ, ಬಾಲಕಿ ಶೌಚಾಲಯಕ್ಕೆ ತೆರಳಿದ್ದಳು. ಅಲ್ಲಿ ಅವಳು ಮಗುವಿಗೆ ಜನ್ಮ ನೀಡಿದ್ದಾಳೆ.
ಅಲ್ಲಿನ ಸಿಬ್ಬಂದಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿ ಮತ್ತು ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತರಾಗಿದ್ದು ಆರೈಕೆಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸಿಬ್ಬಂದಿ ಗಮನಿಸುವ ಮೊದಲು ಬಾಲಕಿ ಮತ್ತು ಆಕೆಯ ತಾಯಿ ನವಜಾತ ಶಿಶುವನ್ನು ಶೌಚಾಲಯದೊಳಗಿನ ಕಸದ ಬುಟ್ಟಿಯಲ್ಲಿ ಇಟ್ಟಿದ್ದರು ಎನ್ನಲಾಗಿದೆ. ಬಾಲಕಿ ಅಪ್ರಾಪ್ತಳಾಗಿರುವುದರಿಂದ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಬಗ್ಗೆ ವಿಚಾರಣೆ ನಡೆಸಿದಾಗ, ಡ್ಯಾನ್ಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ ಒಬ್ಬ ಹುಡುಗನನ್ನು ಭೇಟಿಯಾದೆ. ಅವನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದರ ಪರಿಣಾಮವಾಗಿ ಗರ್ಭಿಣಿಯಾಗಿದ್ದಾಗಿ ತಿಳಿಸಿದ್ದಳು. ಈ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದ ಎಂದು ಆಕೆ ಆರೋಪಿಸಿದ್ದಳು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆಂದು ವರದಿಯಿಂದ ತಿಳಿದುಬಂದಿದೆ.








