



ವಿಟ್ಲ: ತೀಯಾ ಸಮುದಾಯದ ಇತಿಹಾಸ ಪ್ರಸಿದ್ಧ 18 ಭಗವತೀ ಕ್ಷೇತ್ರಗಳಲ್ಲಿ ಒಂದಾದ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವು ವಿಟ್ಲ ಸೀಮೆಯ ಪುಣ್ಯ ಕ್ಷೇತ್ರಗಳಲ್ಲೊಂದು.

ವಿಟ್ಲ ಅರಮನೆಯ ಅರಸರ ಆಡಳಿತಕೊಳಪಟ್ಟ ಕಾಲದಲ್ಲಿ ಈ ಕ್ಷೇತ್ರದಲ್ಲಿ ಬಹಳ ವಿಜೃಂಭಣೆಯಿಂದ ಪೂಜಾ ಉತ್ಸವಾದಿಗಳು ನಡೆಯುತ್ತಿದ್ದವು. ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರದ ಇದೀಗ ಮತ್ತೆ ಜೀರ್ಣೊದ್ಧಾರಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ.

ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಅಳಿಕೆ ಗ್ರಾಮದ ಎರುಂಬು ಎಂಬ ಹಸಿರಿನ ನಡುವೆ ಶ್ರೀ ದೇವಿಯು ತನ್ನ ದೈವೀ ಶಕ್ತಿಯೊಂದಿಗೆ ನೆಲೆಯಾಗಿ ಭಕ್ತರನ್ನು ಹರಸಿಕೊಂಡು ಬಂದಿರುವುದು ಈ ಕ್ಷೇತ್ರದ ವಿಶೇಷತೆ. ’ಬೊಳ್ನಾಡು 40 ಬಿಲ್ಲಿ’ ಎಂದು ಕರೆಯಲ್ಪಡುವ ಈ ಕ್ಷೇತ್ರ ಬಹಳ ಕಾರಣಿಕದ ಸಕಲ ಸಮೃದ್ಧಿಯಿಂದ ಕೂಡಿದ ಅತ್ಯಂತ ಪುರಾತನ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿದೆ. 600 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರ ಅನ್ಯರ ಆಕ್ರಮಣಕ್ಕೆ ಬಲಿಯಾಗಿ ಸಂಪೂರ್ಣ ನಾಶವಾಗಿತ್ತು. ತನ್ನದೇ ಇತಿಹಾಸ ಪೌರಾಣಿಕ ಹಿನ್ನಲೆಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಅನೇಕ ಪುರಾತನ ಕುರುಹುಗಳು ದೊರೆತಿದ್ದು, ಅಷ್ಟಮಂಗಲ ಪ್ರಶ್ನಾಚಿಂತನೆ ಪ್ರಕಾರ ಈ ಕ್ಷೇತ್ರಕ್ಕೆ ತೀಯಾ ಸಮುದಾಯದವರ, ಹಲವಾರು ಮಹನೀಯರ ಪ್ರಯತ್ನದ ನಂತರ ಮುಂಬೈ ಕೊಡುಗೈ ದಾನಿಗಳಾದ ಶ್ರೀ ಕೃಷ್ಣ ಎನ್ ಉಚ್ಚಿಲರವರಿಗೆ ಸ್ವಪ್ನದರ್ಶನವಾಗಿ ಕ್ಷೇತ್ರವನ್ನು ಅರಸುತ್ತಾ ಬಂದು ಪುನರ್ ನಿರ್ಮಾಣದ ಸಂಕಲ್ಪ ಮಾಡಿದರು.

ಕ್ಷೇತ್ರದ ಮೂಲ ನೆಲೆ ಕೈ ತಪ್ಪಿರುವುದರಿಂದ ದೈವ ಹಿತವನ್ನು ಕಂಡು ಸಮೀಪದಲ್ಲಿಯೇ ಬೇರೊಂದು ಜಾಗ ಖರೀದಿಸಿ 20/10/2016 ರಂದು ಗಣಹೋಮ ನಡೆಸಿ, ಊರಿನ ಅರಸರು, ಹಿರಿಯರು ಭಗವತೀ ಕ್ಷೇತ್ರಗಳ ಆಚಾರಪಟ್ಟವರ ಸಹಭಾಗಿತ್ವದಲ್ಲಿ ಮೂತ ಭಗವತೀ, ಎಳೆಯ ಭಗವತೀ, ದಂಡರಾಜ, ಘಂಠಾಕರ್ಣನ್, ವಿಷ್ಣುಮೂರ್ತಿ, ಧೂಮಾವತಿ, ಪಂಜುರ್ಲಿ, ಗುಳಿಗ ಮತ್ತು ನಾಗ ಸಾನಿಧ್ಯಗಳನ್ನೊಳಗೊಂಡ ಕ್ಷೇತ್ರದ ಬಗ್ಗೆ ಸಂಕಲ್ಪ ನಡೆಸಲಾಗಿತ್ತು. 15/03/2025 ರಂದು ಭೂಮಿ ಪೂಜೆ, ಶಿಲನ್ಯಾಸ ನಡೆದು ಇದೀಗ ಅತ್ಯಂತ ಸುಂದರವೂ, ವಿಸ್ತೃತವೂ ಆದ ಕ್ಷೇತ್ರ ಸಮುಚ್ಚಯವು ಬ್ರಹ್ಮಕಲಶದ ಸುಮೂಹರ್ತಕ್ಕೆ ಅಣಿಯಾಗಿ ನಿಂತಿದೆ. ಈ ಕ್ಷೇತ್ರದ ಜೀರ್ಣೋದ್ದಾರ ಅಭಿವೃದ್ಧಿ ಕಾರ್ಯದ ಹರಿಕಾರ ಶ್ರೀ ಕೃಷ್ಣ ಎನ್ ಉಚ್ಚಿಲರವರಿಗೆ ಈ ಕ್ಷೇತ್ರದ ಬಗ್ಗೆ ಹೇಗೆ ಜ್ಮಾನ ಮೂಡಿಬಂತು? ಎಂಬುವುದರ ಹಿಂದೆ ಹಲವಾರು ನಿದರ್ಶನಗಳಿವೆ. ದೂರದ ಮುಂಬೈಯಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಶ್ರೀ ಕೃಷ್ಣ ಎನ್ ಉಚ್ಚಿಲ ರವರು ಕೋರಿಕಾರ್ ತರವಾಡಿಗೆ ಸಂಬಂಧಪಟ್ಟವರು. ಪುರಾತನ ಕ್ಷೇತ್ರಕ್ಕೆ ಸಂಬಂಧಪಟ್ಟ ವ್ಯಕ್ತಿಯೊಬ್ಬರಿಂದ ಬೊಳ್ನಾಡು ಭಗವತೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತದೆ ಎಂಬುವುದಾಗಿ ಅನೇಕ ವರ್ಷಗಳ ಹಿಂದಿನ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಿತ್ತು. ಅದರಂತೆಯೇ ಕೃಷ್ಣ ಎನ್ ಉಚ್ಚಿಲ್ ರವರಿಗೆ ಬೊಳ್ನಾಡು ಕ್ಷೇತ್ರದ ಶ್ರೀ ಭಗವತೀ ದೇವಿಯು ಸ್ವಪ್ನದರ್ಶನವಾಗಿ ಕಂಡುಬಂದು ಈ ಕ್ಷೇತ್ರದ ಬಗ್ಗೆ ಜ್ಞಾನ ನೀಡಿದರು. ಅದಲ್ಲದೆ ಉಚ್ಚಿಲ ಭೈರವನ ಆರಾಧನೆಯ ಪ್ರಶ್ನಾಚಿಂತನೆಯಲ್ಲಿಯೂ ವೇಳೆ ಬೋಳ್ನಾಡು ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಕಂಡುಬಂದಿತ್ತು. ಹೀಗೆ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವನ್ನು ಅರಸಿಕೊಂಡು ಬಂದ ಕೃಷ್ಣ ಉಚ್ಚಿಲರವರ ಮುಂದಾಳತ್ವ ಮಾರ್ಗದರ್ಶನ ಸಹಕಾರದೊಂದಿಗೆ ಇಂದು ಈ ಕ್ಷೇತ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ, ಭರಣಿ ಮಹೋತ್ಸವಕ್ಕೆ ಅಣಿಯಾಗಿ ನಿಂತಿದೆ. ಬೊಳ್ನಾಡು ಶ್ರೀ ಭಗವತೀ ಕ್ಷೇತ್ರವು ತನ್ನ ಗೋಚರಕ್ಕೆ ಸಮೀಪಿಸಿದ ಬಳಿಕ ಕೃಷ್ಣ ಉಚ್ಚಿಲರವರು ಶಿಲನ್ಯಾಸ ಕಾರ್ಯಕ್ರಮ, ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲು ಮುಂದಾಗ್ತಾರೆ.

ಶ್ರೀ ದೇವರನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ, ನಂತರದ ದಿನಗಳಲ್ಲಿ ಪೂಜೆ ಪುರಸ್ಕಾರಗಳನ್ನು ನಡೆಸಿಕೊಂಡು ಬರಲಾಗಿದೆ. ಕೃಷ್ಣ ಎನ್ ಉಚ್ಚಿಲವರ ಬಾಯಲ್ಲಿ ಬರುವ ಶ್ರೀ ದೇವಿಯ ಅಭಯದ ನುಡಿ, ಇವರ ವ್ಯಕ್ತಿತ್ವದಲ್ಲಿ ಅಡಗಿದ ಸಾಮಾಜಿಕ ಕಳಕಳಿ, ಕೈಯೆತ್ತಿ ನೀಡುವ ಶ್ರೀದೇವಿಯ ಪ್ರಸಾದ ಇವೆಲ್ಲವೂ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ, ಮಾನಸಿಕ ಖಿನ್ನತೆ ಇವೆಲ್ಲದಕ್ಕೂ ಪರಿಹಾರ. ಮುಂಬೈಯಿಂದ ಊರಿಗೆ ಆಗಮಿಸುವ ವೇಳೆ ಕೃಷ್ಣ ಎನ್ ಉಚ್ಚಿಲರವರು ಅನಾರೋಗ್ಯ ಪೀಡಿತರಿಗಾಗಿ ಅಗತ್ಯ ಆಯುರ್ವೇದ ಔಷಧಿಯನ್ನು ತಂದು, ಅದನ್ನು ಈ ಕ್ಷೇತ್ರದಲ್ಲಿ ಶ್ರೀ ಭಗವತೀ ದೇವಿಯ ಮುಂದಿರಿಸಿ, ಆ ಔಷಧಿಯನ್ನು ಪ್ರಸಾದ ರೂಪವಾಗಿ ಈ ಕ್ಷೇತ್ರದಲ್ಲಿ ಅನಾರೋಗ್ಯ ಪೀಡಿತರಿಗೆ ನೀಡಿ, ಈ ಮೂಲಕ ತಮ್ಮ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಸುಮಾರು 6-7 ವರ್ಷಗಳ ಹಿಂದೆ ಮನೆಯಿಂದ ಹೋದ ಮಗನೊಬ್ಬ ನಾಪತ್ತೆಯಾಗಿರುತ್ತಾನೆ .ಈ ಸಂದರ್ಭದಲ್ಲಿ ಕಣ್ಣೀರಿನಲ್ಲಿ ಆ ಕುಟುಂಬಕ್ಕೆ ಕೃಷ್ಣ ಉಚ್ಚಿಲರವರ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರಕ್ಕೆ ಬನ್ನಿ, ತಾಯಿ ಭಗವತಿಯಲ್ಲಿ ಮನಶುದ್ಧತೆಯಿಂದ ಪ್ರಾರ್ಥೀಸಿ ಎಂದು ಸಾಂತ್ವನ ಹೇಳ್ತಾರೆ. ಅದರಂತೆಯೇ ಆ ಕುಟುಂಬ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಕೃಷ್ಣ ಉಚ್ಚಿಲರವರ ಸಮ್ಮುಖದಲ್ಲಿಯೇ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಾರೆ. ಆ ಕ್ಷಣಾರ್ಧದಲ್ಲೇ ನಾಪತ್ತೆಯಾದ ಮಗನ ಇರುವಿಕೆಯ ಬಗ್ಗೆ ಸುಳಿವು ಗೋಚರವಾಗುತ್ತದೆ. ಅದಲ್ಲದೇ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಿಂದ ಶ್ರೀ ಕೃಷ್ಣ ಉಚ್ಚಿಲರವರು ತೀವ್ರ ಅನಾರೋಗ್ಯ ಪೀಡಿತರಿಗೆ ದೇವಿಯ ಪ್ರಸಾದವನ್ನು ನೀಡಿ ಅದೆಷ್ಟೋ ರೋಗ ರುಜಿನಗಳನ್ನು ಮಾಯಗೊಳಿಸಿದ ಅದೆಷ್ಟೋ ನಿದರ್ಶನಗಳಿವೆ. ಭಂಡಾರದ ಮನೆಯಲ್ಲಿ ನಿತ್ಯ ಪೂಜೆ ಮತ್ತು ಹೂವಿನ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತೀ ಮಂಗಳವಾರ ಇಲ್ಲಿ ಶ್ರೀ ದೇವಿಗೆ ಭಜನಾ ಸೇವೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. *ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರಿಗೂ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರಕ್ಕೂ ಇರುವ ಸಂಬಂಧ..!*ವಿಟ್ಲ ಸೀಮೆಯಲ್ಲಿ ಅತ್ಯಂತ ಪುರಾತನ ಪೌರಾಣಿಕ ಹಿನ್ನಲೆಯನ್ನು ಹೊಂದಿರುವ ದೇವಿ ಕ್ಷೇತ್ರಗಳಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರ ಒಂದು. ಹಿಂದಿನ ಕಾಲದಲ್ಲಿ ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದಲ್ಲಿ ನಡೆಯುತ್ತಿರುವ ಭರಣಿ ಮಹೋತ್ಸವದ ಸಂದರ್ಭದಲ್ಲಿ ಬೊಳ್ನಾಡು ಕ್ಷೇತ್ರದಿಂದ ಶ್ರೀ ಭಗವತೀಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಪದ್ದತಿ ಹಿಂದಿನ ಕಾಲದಲ್ಲಿ ರೂಢಿಯಲ್ಲಿತ್ತು. ಅಂದಿನ ಕಾಲದಲ್ಲಿ ಕಾಲ್ನಿಡಿಗೆಯಲ್ಲಿ, ದೊಂದಿ ಬೆಳಕಿನೊಂದಿಗೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಸಂಪ್ರದಾಯವಿತ್ತು. ಇದೀಗ ಮತ್ತೆ ಅದೇ ಸಂಪ್ರದಾಯವನ್ನು ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿತ್ತು, ಸಾವಿರಾರು ವರ್ಷಗಳ ಬಳಿಕ ಮಾ. 25 ರಂದು ರಾತ್ರಿ 7 ಗಂಟೆಗೆ ದೇವರ ಭೇಟಿ ಉತ್ಸವ ನಡೆಯಲಿದೆ. ಈ ರೀತಿಯಾಗಿ ಮುಂದಿನ ಮೂರು ವರ್ಷಗಳಿಗೊಮ್ಮೆ ಬೊಳ್ನಾಡು ಶ್ರೀ ಭಗವತೀ ದೇವಿಯು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರನ್ನು ಭೇಟಿಯಾಗುವ ಪದ್ದತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶ್ರೀ ಕೃಷ್ಣ ಉಚ್ಚಿಲರವರ ಮುಂದಾಳತ್ವ ಮಾರ್ಗದರ್ಶನದಲ್ಲಿ ಬೋಳ್ನಾಡು ಶ್ರೀ ಭಗವತೀ ತೀಯಾ ಸಮಾಜ ಸೇವಾ ಸಮಿತಿ (ರಿ) ಎರುಂಬು ಮತ್ತು ಸಮಸ್ತ ಆಸ್ತಿಕ ಬಾಂಧವರ ಸಹಭಾಗಿತ್ವದಲ್ಲಿ ಮಾ. 9 ರಿಂದ ಮಾ.16 ರವರೆಗೆ ಪುನರ್ ನಿರ್ಮಾಣಗೊಂಡ ಶ್ರೀ ಚೀರುಂಭ ಭಗವತೀ ಮತ್ತು ಪರಿವಾರ ದೈವಗಳ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಬ್ರಹ್ಮ ಶ್ರೀ ತಂತ್ರಿವರ್ಯ ಉಳಿಯತ್ತಾಯ ವಿಷ್ಣುಅಸ್ರರವರ ನೇತೃತ್ವದಲ್ಲಿ ನಡೆಯಲಿದೆ. ಹಾಗೂ ಮಾ. 20 ರಿಂದ ಮಾ. 27 ರವರೆಗೆ ಭರಣಿ ಮಹೋತ್ಸವವು ಕಣ್ಣ ಕಲೆಕರಾರರ ನೇತೃತ್ವದಲ್ಲಿ ನಡೆಯಲಿದೆ.