


ನವದೆಹಲಿ: 2026 ರ ವರ್ಷದ ಮೊದಲ ಸೂರ್ಯಗ್ರಹಣ ಮಂಗಳವಾರ(ಫೆ.17) ಗೋಚರವಾಗಲಿದೆ. ಇದನ್ನು ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಕಣ ಸೂರ್ಯಗ್ರಹಣ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಮಂಗಳವಾರ ಮಧ್ಯಾಹ್ನ 3:26 ರ ವೇಳೆಗೆ ಗ್ರಹಣ ಪ್ರಾರಂಭವಾಗಿ ಸಂಜೆ 7:57 ಕ್ಕೆ ಕೊನೆಗೊಳ್ಳಲಿದೆ. ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, 2 ನಿಮಿಷ 20 ಸೆಕೆಂಡುಗಳ ವರೆಗೆ ಇರಲಿದೆ. ಸಂಪೂರ್ಣ ಸೂರ್ಯಗ್ರಹಣದ ವೇಳೆ ಸೂರ್ಯನ ಕೇಂದ್ರದ 96% ರಷ್ಟನ್ನು ಚಂದ್ರ ಆವರಿಸಲಿದೆ. ಆದರೆ ಈ ಗ್ರಹಣ ಭಾರತದಲ್ಲಿ ಗೋಚರ ಆಗುವುದಿಲ್ಲ.
ಎಲ್ಲೆಲ್ಲಿ ಗೋಚರ?
ಅಂಟಾರ್ಟಿಕಾ, ದಕ್ಷಿಣ ಆಫ್ರಿಕಾದ ಪ್ರದೇಶದಲ್ಲಿ, ದಕ್ಷಿಣ ಆಫ್ರಿಕಾ, ಟಾಂಜಾನಿಯಾ, ಜಾಂಬಿಯಾ ಮತ್ತು ಜಿಂಬಾಬ್ವೆಯಂತಹ ದೇಶಗಳಲ್ಲಿ ಗೋಚರವಾಗಲಿದೆ. ಆಕಾಶವೀಕ್ಷಕರು ವಿಶೇಷ ವೀಕ್ಷಣಾ ಸಾಧನಗಳನ್ನ ಬಳಸಿಕೊಂಡು ಗ್ರಹಣ ವೀಕ್ಷಿಸಲಿದ್ದಾರೆ ಎನ್ನಲಾಗಿದೆ.
ʻರಿಂಗ್ ಆಫ್ ಫೈರ್ʼ ಎಂದರೇನು?
ನಾಸಾ ಹೇಳುವಂತೆ, ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಅಥವಾ ಹತ್ತಿರದಲ್ಲಿದ್ದಾಗ ಸಂಭವಿಸುತ್ತದೆ. ಚಂದ್ರನು ಆಕಾಶದಲ್ಲಿ ಸ್ವಲ್ಪ ಚಿಕ್ಕದಾಗಿ ಕಾಣಿಸಿಕೊಳ್ಳಲಿದ್ದು, ಸೂರ್ಯನನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಿಲ್ಲ. ಹಾಗಾಗಿ ಸಂಪೂರ್ಣ ಕತ್ತಲಾಗುವ ಬದಲಿಗೆ ವೀಕ್ಷಕರು ಸೂರ್ಯನ ಮುಂದೆ ಬಂದ ಚಂದ್ರನ ಗಾಢ ವೃತ್ತಾಕಾರದ ಸಿಲೂಯೆಟ್(ಚಂದ್ರನ ಸುತ್ತ ಬೆಳಕು ಇರುವ ಮಾದರಿ) ಅನ್ನು ವೀಕ್ಷಿಸಬಹುದು. ಆಗ ಸೂರ್ಯನ ಬೆಳಕು ಉಂಗುರದ ಮಾದರಿಯಲ್ಲಿ ಗೋಚರಿಸುತ್ತದೆ. ಅದಕ್ಕಾಗಿ ʻರಿಂಗ್ ಆಫ್ ಫೈರ್ʼ ಎಂದು ಕರೆಯಲಾಗುತ್ತದೆ.








