Friday, July 24, 2026
spot_imgspot_img
spot_imgspot_img

ವಿಟ್ಲದ ಹಿರಿಮೆಗೆ ಮತ್ತೊಂದು ಗರಿಮೆ- ಗ್ರಾಮೀಣ ಹಿನ್ನೆಲೆಯಿಂದ ಸಿವಿಲ್ ನ್ಯಾಯಾಧೀಶ ಸ್ಥಾನಕ್ಕೆ ಮನೋಜ್ ಕುಮಾರ್ ಯು-ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಹಾದಿ

- Advertisement -
- Advertisement -

ವಿಟ್ಲ: ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಯುವ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗುವುದು ಅಪಾರ ಪ್ರತಿಭೆ, ಶ್ರಮ ಹಾಗೂ ನಿಷ್ಠೆಯ ಫಲವಾಗಿದೆ.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆ ಹಾಗೂ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ವತಿಯಿಂದ 2025ನೇ ಸಾಲಿನ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ನಡೆಸಿದ ಪರೀಕ್ಷೆಯಲ್ಲಿ ಬಂಟ್ವಾಳ ತಾಲೂಕು ಕೇಪು ಗ್ರಾಮದ ಶಿವಪ್ಪ ಮತ್ತು ಶಶಿಕಲಾ ದಂಪತಿಯ ಪುತ್ರ ಮನೋಜ್ ಕುಮಾರ್ ಯು ಅವರು ಕಿರಿಯ ವಯಸ್ಸಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ವಿಶಿಷ್ಟ ಸಾಧನೆ ಮಾಡಿದ್ದಾರೆ.

2025ರ ಅಕ್ಟೋಬರ್ ತಿಂಗಳಲ್ಲಿ ಪ್ರಾಥಮಿಕ ಪರೀಕ್ಷೆ, ಡಿಸೆಂಬರ್ ತಿಂಗಳಲ್ಲಿ ಮುಖ್ಯ ಪರೀಕ್ಷೆ ಹಾಗೂ 2026ರ ಜನವರಿಯಲ್ಲಿ ಬೆಂಗಳೂರಿನ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆದ ನೇರ ಸಂದರ್ಶನ ಸೇರಿದಂತೆ ಮೂರು ಹಂತದ ಕಠಿಣ ಆಯ್ಕೆ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿ ಅವರು ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.

ಮನೋಜ್ ಕುಮಾರ್ ಯು ಅವರು ಕಳೆದ ಏಳು ವರ್ಷಗಳಿಂದ ಪುತ್ತೂರಿನ ಖ್ಯಾತ ವಕೀಲರಾದ ಕೆ. ನಾಗೇಶ್ ಶರ್ಮ ಅವರೊಂದಿಗೆ ಕಿರಿಯ ವಕೀಲರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಳೆದ ಎರಡು ವರ್ಷಗಳಿಂದ ವಕೀಲರಾದ ಪ್ರಶಾಂತ್ ಪೂಜಾರಿ ಅವರೊಂದಿಗೆ ಸೇರಿ ವಿಟ್ಲದಲ್ಲಿ “ಪ್ರಮಾ ಅಸೋಸಿಯೇಟ್ಸ್” ಎಂಬ ಹೆಸರಿನಲ್ಲಿ ಸ್ವಂತ ವಕೀಲರ ಕಚೇರಿಯನ್ನು ತೆರೆದು ವಕೀಲ ವೃತ್ತಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅವರ ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡಿಬಾಗಿಲಿನಲ್ಲಿ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಕಾನೂನು ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪಡೆದಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬಂದ ಯುವ ವಕೀಲನಾಗಿ ಕಿರಿಯ ವಯಸ್ಸಿನಲ್ಲಿ ಈ ಮಟ್ಟದ ಸಾಧನೆ ಮಾಡಿರುವ ಮನೋಜ್ ಕುಮಾರ್ ಯು ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವ ವಕೀಲರಿಗೆ ಮಾದರಿಯಾಗಿದ್ದು, ಅವರ ಸಾಧನೆಗೆ ವಿವಿಧ ಸಂಘಟನೆಗಳು, ವಕೀಲರು ಹಾಗೂ ಸಾರ್ವಜನಿಕರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Related news

error: Content is protected !!