ಸಾಲೆತ್ತೂರಿನಲ್ಲಿ ಚೆಕ್ ಪೋಸ್ಟ್ ಹಾಕುವ ಮೂಲಕ ಅರಣ್ಯ ಭಕ್ಷಕರ ಮಟ್ಟಹಾಕಬಾರದೇ.? – ಸಾರ್ವಜನಿಕರ ಆಕ್ರೋಶ




ವಿಟ್ಲ-ಸಾಲೆತ್ತೂರು-ಮಂಚಿ ರಸ್ತೆಯಲ್ಲಿ ಟಿಂಬರ್ ಮಾಫಿಯಾ ಅಟ್ಟಹಾಸ ಜೋರಾಗಿ ಕಂಡುಬರುತ್ತಿದೆ. ಪರಿಸರ ರಕ್ಷಣೆಯ ನೆಪದಲ್ಲಿ “ಕಾಡು ಬೆಳೆಸಿ-ನಾಡು ಉಳಿಸಿ”ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರತೀ ವರ್ಷ ಲಕ್ಷಾಂತರ ಗಿಡಗಳನ್ನು ಅಲ್ಲಲ್ಲಿ ನೀಡುತ್ತಾ ಫೊಟೋ ಹೊಡೆಸಿ ಅರಣ್ಯ ರಕ್ಷಣೆಯ ಸೋಗಿನಲ್ಲಿ ಬದುಕುತ್ತಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಅರಣ್ಯ ಭಕ್ಷಕರ ಲಂಚ ತಿಂದು ಗಾಡ ನಿದ್ರೆಗೆ ಜಾರಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ಹತ್ತಾರು ಅಕ್ರಮ ಮರ ಸಾಗಾಟದ ಮಿನಿ ಲಾರಿಗಳು, ಪಿಕಪ್ ವಾಹನಗಳು ವಿಟ್ಲ-ಸಾಲೆತ್ತೂರು ಹಾಗೂ ಮಂಚಿ-ಸಾಲೆತ್ತೂರು ರಸ್ತೆಯಲ್ಲಿ ಓಡಾಟ ಕಾಣುತ್ತಿದೆ. ರಾತ್ರಿ ಹಗಲೆನ್ನದೇ ಶರವೇಗದಲ್ಲಿ ಸಾಗುವ ಅಕ್ರಮ ಮರ ಸಾಗಾಟದ ವಾಹನಗಳಿಗೆ ಹೇಳೋರಿಲ್ಲ- ಕೇಳೋರಿಲ್ಲ ಎಂಬಂತಾಗಿದೆ. ಈ ಹಿಂದೆ ಕರ್ತವ್ಯಕ್ಕೆ ಬಂದ ಅದ್ಯಾವುದೋ ಅರಣ್ಯಾಧಿಕಾರಿ ಸಾಲೆತ್ತೂರು ಜಂಕ್ಷನಲ್ಲಿದ್ದ ಅರಣ್ಯ ಇಲಾಖೆಯ ಚೆಕ್ ಪೋಸ್ಟನ್ನು ತೆರವು ಮಾಡಿರುತ್ತಾರೆ. ಈ ಬಗ್ಗೆ ಚೆಕ್ ಪೋಸ್ಟ್ ಯಾಕೆ ತೆರವು ಮಾಡಿದಿರಿ ಎಂದು ಅಧಿಕಾರಿಗಳಲ್ಲಿ ಕೇಳಿದರೆ ಸಿಬ್ಬಂದಿಗಳ ಕೊರತೆಯಿದೆ ಎಂಬ ಉಡಾಫೆ ಉತ್ತರ ಕೇಳಿ ಬರುತ್ತಿದೆ. ಅದಲ್ಲದೇ ಈವಾಗ ಸಂಚಾರಿ ಅರಣ್ಯದಳ(ಮೊಬೈಲ್ ಸ್ಕ್ವಾಡ್)ಇರುವ ಕಾರಣ ಚೆಕ್ ಪೋಸ್ಟ್ ಅಗತ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಮೊಬೈಲ್ ಸ್ಕ್ವಾಡ್ ಎಂಬುದು ನಲ್ವತ್ತು ಕಿಲೋ ಮೀಟರ್ ದೂರದಲ್ಲಿರುವ ಮಂಗಳೂರಲ್ಲಿದೆ ಅಕ್ರಮ ಮರ ಸಾಗಾಟದ ವಾಹನದ ಬಗ್ಗೆ ಮಾಹಿತಿ ನೀಡಿದರೆ ಮೊಬೈಲ್ ಸ್ಕ್ವಾಡ್ ಬರುವಷ್ಟರಲ್ಲಿ ನಾಲ್ಕು ಬಾರಿ ಸಾಗಾಟ ಮುಗಿದಿರುತ್ತದೆ. ಅರಣ್ಯ ಇಲಾಖೆ ಎಂಬುದು ಇದ್ದೂ ಇಲ್ಲದಂತಾಗಿದೆ ಎಂಬ ಆಕ್ರೋಶ ನಾಗರಿಕರು ಹಾಗೂ ವೃಕ್ಷ ಪ್ರೇಮಿಗಳಿಂದ ವ್ಯಕ್ತವಾಗಿದೆ. ಈ ಬಗ್ಗೆ ಇನ್ನಾದರೂ ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸಾಲೆತ್ತೂರಿನಲ್ಲಿ ಚೆಕ್ ಪೋಸ್ಟ್ ಹಾಕುವ ಮೂಲಕ ಅರಣ್ಯ ಭಕ್ಷಕರ ಮಟ್ಟಹಾಕಬಾರದೇ.? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.