


ಅಬುಧಾಬಿ: ಕ್ಷಿಪಣಿ ದಾಳಿಗಳ ಬಳಿಕ ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ ಮತ್ತು ಹಣಕಾಸು ವ್ಯವಹಾರಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಥಗಿತಗೊಳಿಸಿದೆ.
ಪ್ರಾದೇಶಿಕ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇರಾನ್ನೊಂದಿಗಿನ ಎಲ್ಲಾ ವ್ಯಾಪಾರ, ವಾಣಿಜ್ಯ ವಿನಿಮಯ ಮತ್ತು ಹಣಕಾಸು ವಹಿವಾಟುಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ಯುಎಇ ವಿದೇಶಾಂಗ ಸಚಿವಾಲಯದ ಸಂವಹನ ನಿರ್ದೇಶಕ ಅಫ್ರಾ ಅಲ್ ಹಮೇಲಿ ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಸಂಭಾವ್ಯ ಕ್ಷಿಪಣಿ ಬೆದರಿಕೆಗಳು ಇದ್ದು , ತಕ್ಷಣವೇ ಹತ್ತಿರದ ಸುರಕ್ಷಿತ ಸ್ಥಳಗಳಲ್ಲಿ ಇರಿ ಎಂದು ಜನತೆಗೆ ಆಂತರಿಕ ಸಚಿವಾಲಯವು ಎಚ್ಚರಿಕೆ ನೀಡಿದೆ.
ಕಳೆದ ಕೆಲವು ವಾರಗಳಿಂದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ADNOCಗೆ ಸೇರಿದ ಟ್ಯಾಂಕರ್ಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ.
ಫೆ. 28 ರಂದು ಮಧ್ಯಪ್ರಾಚ್ಯ ಯುದ್ಧ ಪ್ರಾರಂಭವಾದಾಗ ಇರಾನ್ ದಾಳಿಗೆ ಯುಎಇ ತುತ್ತಾಯಿತು. ಸುಮಾರು 3,000 ಕ್ಷಿಪಣಿಗಳು ಮತ್ತು ಡ್ರೋನ್ಗಳು ಯುಎಇ ಮೇಲೆ ದಾಳಿ ನಡೆಸಿವೆ.
ಗಲ್ಫ್ನಲ್ಲಿ ಹಡಗಿನ ಮೇಲೆ ಇರಾನ್ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿದೆ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಮಂಗಳವಾರ ಆರೋಪಿಸಿದೆ. ಆದರೆ, ಈ ಆರೋಪವನ್ನು ಇರಾನ್ ತಳ್ಳಿಹಾಕಿದೆ ಎಂದು ತಿಳಿದುಬಂದಿದೆ.








