



ಉಡುಪಿ: ತಾಲೂಕಿನ ಮೂಡನಿಡಂಬೂರು ಗ್ರಾಮದ ಅಜ್ಜರಕಾಡುವಿನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಆಸ್ಪತ್ರೆಗೆ ಆಕ್ಸಿಜನ್ ಪೈಪ್ ಲೈನ್ ಜೋಡಣೆಗೆ ಸ್ಟೋರೂಮ್‌ನಲ್ಲಿಟ್ಟಿದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್‌ಗಳನ್ನು ಕಳವು ಮಾಡಿದ್ದ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು ಒಟ್ಟು ಆರೂವರೆ ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಬೆಂಗಳೂರು ಡಾ.ಶಿವರಾಮ ಕಾರಂತ ನಗರದ ಮಹಮ್ಮದ್ ಜಾವೀದ್ (29) ಹಾಗೂ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸಯ್ಯದ್ ದಾದಾ ಪಿರ್ @ ಲಿಯಾಕತ್ (28 ) ಎಂದು ಗುರುತಿಸಲಾಗಿದೆ
ಆರೋಪಿಗಳನ್ನು ಶಿವಮೊಗ್ಗ ನಗರದಲ್ಲಿ ಆ.12 ರಂದು ವಶಕ್ಕೆ ಪಡೆದ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ವಿ ಬಡಿಗೇರ ನೇತೃತ್ವದ ಪೊಲೀಸರ ವಿಶೇಷ ತಂಡ, ಆರೋಪಿಗಳು ಕಳವು ಮಾಡಿದ್ದ ಒಟ್ಟು ರೂ 2,81,000 ಮೌಲ್ಯದ ತಾಮ್ರದ ಪೈಪ್ ತುಂಡುಗಳನ್ನು ಕೃತ್ಯಕ್ಕೆ ಬಳಸಿದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಎಕ್ಸೆಲ್ ಪ್ರೇಮ್ ಸಹಿತ ಒಟ್ಟು ರೂ 6,31,500. ಮೌಲ್ಯದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಆಸ್ಪತ್ರೆಯಲ್ಲಿ ತಾಮ್ರದ ಪೈಪ್ ಕಾಣದೇ ಇದ್ದಾಗ, ಆಸ್ಪತ್ರೆಯ ಸಿಸಿ ಕ್ಯಾಮಾರಗಳನ್ನು ಪರಿಶೀಲನೆ ನಡೆಸಲಾಗಿತ್ತು. ಜುಲೈ 20ರಂದು ಲಿಯಾಖತ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಸ್ಟೋರ್ ರೂಮಿನಲ್ಲಿಟ್ಟಿದ್ದ ಕಾಪರ್ ಪೈಪ್, ಫಿಟಿಂಗ್ಸ್ ಮತ್ತು ಹಳೆ ಕಾಪರ್ ಸ್ಟ್ರಿಪ್ ಸೇರಿ ಸುಮಾರು 8 ಲಕ್ಷ ಮೌಲ್ಯದ ಸೊತ್ತುಗಳನ್ನು ಕಾರಿನಲ್ಲಿ ತುಂಬಿಕೊಂಡು ಕಳವು ಮಾಡಿಕೊಂಡು ಹೋಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.








