Friday, March 29, 2024
spot_imgspot_img
spot_imgspot_img

ಉಡುಪಿ: ಎರಡು ವಾರಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣ; 6 ಮಂದಿ ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಉಡುಪಿ: ಉಡುಪಿ ಠಾಣಾ ವ್ಯಾಪ್ತಿಯಲ್ಲಿ ಎರಡು ವಾರಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಉಡುಪಿಯ ಪೊಲೀಸರು ಬಂಧಿಸಿದ್ದಾರೆ.

ಮೇ 23ರಂದು ರಾತ್ರಿ ಶ್ಯಾಮ್ ಎಂಬವರು ತನ್ನ ಸ್ನೇಹಿತರೊಂದಿಗೆ ಉಡುಪಿಯ ಪುತ್ತೂರು ಗ್ರಾಮದ ರಾಜೀವ ನಗರದಲ್ಲಿರುವ ಬಾವಿಕಟ್ಟೆಯಲ್ಲಿ ಕುಳಿತುಕೊಂಡು ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ಆರೋಪಿಗಳು ಪೂರ್ವದ್ವೇಷದಲ್ಲಿ ಕೊಲೆ ಮಾಡುವ ಉದ್ದೇಶದಿಂದ ಶ್ಯಾಮ್ ಅವರಿಗೆ ಏಕಾಏಕಿಯಾಗಿ ತಲ್ವಾರ್ ಮತ್ತು ಇತರ ಆಯುಧಗಳಿಂದ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದರು.

ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಕೊಲೆ ಪ್ರಯತ್ನ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜೂ.4ರಂದು ಆರೋಪಿಗಳಾದ ಚರಣ್, ಪುನೀತ್, ಮುಹಮ್ಮದ್ ಫರ್ವೆಝ್, ಅಭಿಜೀತ್ ಎಂಬವರನ್ನು ಉಡುಪಿ ರಾಜಾಂಗಣ ಪಾರ್ಕಿಂಗ್ ಬಳಿಯ ಮಥುರ ಕಂಫರ್ಟಸ್ಸ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಲಾಕ್‌ಡೌನ್ ನಿಮಯ ಉಲ್ಲಂಘಿಸಿ ಆರೋಪಿಗಳಿಗೆ ರೂಮ್ ನೀಡಿರುವ ವಸತಿಗೃಹದ ಮ್ಯಾನೇಜರ್ ಸುರೇಶ್ ಶೆಟ್ಟಿಗಾರ್ ಮತ್ತು ವಸತಿ ಗೃಹದ ಮಾಲಕರ ಮೇಲೂ ಪ್ರಕರಣ ದಾಖಲಿಸಲಾಗಿದೆ.

ಉಳಿದ ಆರೋಪಿಗಳಾದ ಶ್ಯಾನ್ವಾಝ್ ಮತ್ತು ರತನ್ ಎಂಬವರನ್ನು ಚರಣ್ ನೀಡಿದ ಮಾಹಿತಿಯಂತೆ ಆದಿ ಉಡುಪಿಯಲ್ಲಿ ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ಕಿಶೋರ್ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಒಂದು ಕತ್ತಿ, ಒಂದು ತಲವಾರ್, ಮೂರು ದ್ಚಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಚರಣ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪೊಕ್ಸೊ ಕಾಯ್ದೆ ಮತ್ತು ದಲಿತ ದೌರ್ಜನ್ಯ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯಿದೆಯಡಿ ಪ್ರಕರಣಗಳು ದಾಖಲಾಗಿವೆ. ಪುನೀತ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ, ಸೆನ್ ಪೊಲೀಸ್ ಠಾಣೆಯಲ್ಲಿ, ಮಣಿಪಾಲ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣಗಳು ದಾಖಲಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಉಡುಪಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಅಪರಾಧ ಶಾಖೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ವೈಲೆಟ್ ಫೇಮಿನಾ, ಎಎಸೈ ವಿಜಯ್, ಸಿಬ್ಬಂದಿ ಜೀವನ್, ರಾಜೇಶ್, ಮನೋಹರ್, ಚೇತನ್, ರಿಯಾಝ್ ಮತ್ತು ವಿಶ್ವನಾಥ ಈ ಕಾರ್ಯಾಚರಣೆ ನಡೆಸಿದ್ದಾರೆ.

- Advertisement -

Related news

error: Content is protected !!