- Advertisement -
- Advertisement -


ಉಡುಪಿ: ಕಮಲಶಿಲೆ ದೇವಸ್ಥಾನದಲ್ಲಿ ಗೋಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಗಳೂರು ಬಜ್ಪೆಯ ವಾಜೀದ್ ಜೆ. (26) ಹಾಗೂ ಫೈಜಲ್ (40) ಎಂದು ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಮಲಶಿಲೆಯ ಗೋಶಾಲೆಯ ಬಾಗಿಲಿನ ಬೀಗ ಮುರಿದು, ಜೂನ್ 15ರ ತಡರಾತ್ರಿ 2.45ರ ಸುಮಾರಿಗೆ ನುಗ್ಗಿದ್ದ ಇಬ್ಬರು, ಮೂರು ಹಸುಗಳ ಹಗ್ಗವನ್ನು ಕತ್ತಿಯಿಂದ ಕಡಿದು ಸಾಗಾಟಕ್ಕೆ ಯತ್ನಿಸಿದ್ದರು. ಈ ದೃಶ್ಯ ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೂಡಲೇ ಆ ತಂಡ ಪೊಲೀಸರಿಗೆ ಹಾಗೂ ದೇವಸ್ಥಾನದ ಭದ್ರತಾ ಸಿಬಂದಿಗೆ ಮಾಹಿತಿ ನೀಡಿದೆ. ಇದರಿಂದ ಸಂಭಾವ್ಯ ಗೋಕಳ್ಳತನ ವಿಫಲಗೊಂಡಿತ್ತು.
ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ ಗೋಳಿಯಂಗಡಿ ಸಮೀಪ ಬಂಧಿಸಿದ್ದು, ಇನ್ನೊಬ್ಬನ ಪತ್ತೆಗೆ ಬಲೆ ಬೀಸಿದ್ದಾರೆ.
- Advertisement -








