Sunday, May 5, 2024
spot_imgspot_img
spot_imgspot_img

ಉಪ್ಪಿನಂಗಡಿ: ದೇವರಿಗೆ ಸಮರ್ಪಿಸಿದ ಆಭರಣ ನಾಪತ್ತೆ ಪ್ರಕರಣ; ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾದ ಮಾಜಿ ಅಧ್ಯಕ್ಷ..!!

- Advertisement -G L Acharya panikkar
- Advertisement -

ಉಪ್ಪಿನಂಗಡಿ: ಬ್ರಹ್ಮಕಲಶಾಭಿಷೇಕದ ವೇಳೆ ದೇವರಿಗೆ ಸಮರ್ಪಿಸಿದ ಆಭರಣ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ದೇವಳದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ನಾಪತ್ತೆಯಾದ ಚಿನ್ನಾಭರಣದೊಂದಿಗೆ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಪೆರ್ನೆಯ ಕಳೆಂಜ – ದೇಂತಡ್ಕದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶಾಭಿಷೇಕದ ವೇಳೆ ಭಕ್ತರೋರ್ವರು ಸುಮಾರು ಮೂರು ಮುಕ್ಕಾಲು ಪವನಿನ ಐದು ಎಳೆಗಳಿಂದ ಕೂಡಿದ ಚಿನ್ನದ ಜೋಮಾಲೆ ಸರವನ್ನು ದೇವರಿಗೆ ಸಮರ್ಪಿಸಿದ್ದರು. ಇದರೊಂದಿಗೆ ಈ ಹಿಂದಿನ ದೇವಾಲಯದ ಪುನರ್ ನಿರ್ಮಾತೃ ದಿ. ರಾಮದಾಸ್ ರೈ ಎಂಬವರು ಸಮರ್ಪಿಸಿದ ಎರಡು ಪವನಿನ ಚಿನ್ನದ ಸರ ದೇವಾಲಯದಲ್ಲಿತ್ತು.

ಕಳೆದ ಭಾನುವಾರ ಆಡಳಿತಾಧಿಕಾರಿಯ ಸಮ್ಮುಖದಲ್ಲಿ ಆಭರಣಗಳು ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯ ಮಾಜಿ ಕಾರ್ಯದರ್ಶಿ ಗೋಪಾಲ ಶೆಟ್ಟಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಶಂಕಿತರ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಂತೆಯೇ, ಚಿನ್ನಾಭರಣವನ್ನು ಉಪ್ಪಿನಂಗಡಿಯ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡಮಾನವಿರಿಸಿ ಹಣ ಪಡೆದಿದ್ದ ಮಾಜಿ ಅಧ್ಯಕ್ಷ ರೋಹಿತಾಕ್ಷ ಬಾಣಬೆಟ್ಟು ಚಿನ್ನಾಭರಣವನ್ನು ಹಣಕಾಸು ಸಂಸ್ಥೆಯಿಂದ ಬಿಡಿಸಿಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.

ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ದೇವಾಲಯದಲ್ಲಿ ಮಹಜರು ನಡೆಸಿ ಇಲಾಖಾ ಕ್ರಮ ಕೈಗೊಂಡಿದ್ದಾರೆ. ಆದರೆ ಮತ್ತೊಂದು ಚಿನ್ನದ ಸರ ನಾಪತ್ತೆಯಾಗಿದ್ದು, ಇದರ ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!